ಸುದ್ದಿಗಳು

ರಾಮನೊಂದಿಗೆ ಸವಾರಿ ಮಾಡಲಿರುವ ಸೋನು

ಕೆ. ಶಿವರುದ್ರಯ್ಯ ನಿರ್ದೇಶನದ ಸಿನಿಮಾ ‘ರಾಮನ ಸವಾರಿ’

ಬೆಂಗಳೂರು, ಸೆ.23: ‘ಇಂತಿ ನಿನ್ನ ಪ್ರೀತಿಯ’ ಚಿತ್ರದ ಮೂಲಕ ಚಂದನವನಕ್ಕೆ ಕಾಲಿಟ್ಟ ನಟಿ ಸೋನು ಗೌಡ. ಅಲ್ಲಿಂದ ಶುರುವಾದ ಇವರ ಸಿನಿಪಯಣ ಇಲ್ಲಿಯವರೆಗೂ ಬಂದಿದೆ. ‘ಪರಮೇಶ ಪಾನವಾಲ’, ’ಹಾಪ್ ಮೆಂಟ್ಲು’, ’ಗುಲಾಮ’ , ‘ಗುಳ್ಟು’ ಸೇರಿದಂತೆ ಅನೇಕ ಚಿತ್ರಗಳಲ್ಲಿ ಭಿನ್ನ ಭಿನ್ನ ಪಾತ್ರದಲ್ಲಿ ನಟಿಸಿದ್ದಾರೆ.

ಗುಳ್ಟು

ಸೋನು ಗೌಡ ಅಭಿನಯದ ‘ಗುಳ್ಟು’ ಚಿತ್ರವು ಶತದಿನ ಪೂರೈಸುವ ಮೂಲಕ ಇವರಿಗೊಂದು ಹೆಸರು ತಂದು ಕೊಟ್ಟಿತು. ಆ ಚಿತ್ರದ ನಂತರ ‘ಐ ಲವ್ ಯೂ’ ಹಾಗೂ ‘ಶಾಲಿನಿ ಐಎಎಸ್’ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಇದೀಗ ಈ ಚಿತ್ರದೊಂದಿಗೆ ಮತ್ತೊಂದು ಚಿತ್ರ ಸೇರ್ಪಡೆಗೊಂಡಿದೆ.

ರಾಮನ ಸವಾರಿ

ಹೌದು, ಸೋನು ಇದೀಗ ‘ರಾಮನ ಸವಾರಿ’ ಶೀರ್ಷಿಕೆಯ ಹೊಸ ಚಿತ್ರವನ್ನು ಒಪ್ಪಿಕೊಂಡಿದ್ದು, ಈಗಾಗಲೇ ಚಿತ್ರೀಕರಣದಲ್ಲಿಯೂ ಪಾಲ್ಗೊಂಡಿದ್ದಾರೆ. ಈ ಚಿತ್ರಕ್ಕೆ ಕೆ. ಶಿವರುದ್ರಯ್ಯ ನಿರ್ದೇಶನ ಮಾಡುತ್ತಿದ್ದಾರೆ. ಇವರು ಈ ಹಿಂದೆ ‘ಮಾರಿಕೊಂಡವರು’ ಚಿತ್ರವನ್ನು ಮಾಡಿದ್ದರು. ಈ ಚಿತ್ರದಲ್ಲೂ ಸೋನು ಮುಖ್ಯ ಪಾತ್ರ ಮಾಡಿದ್ದರು.

ಚಿತ್ರದ ಬಗ್ಗೆ

‘ಮಾರಿಕೊಂಡವರು’ ಚಿತ್ರದ ನಂತರ ನಟಿ ಮತ್ತು ನಿರ್ದೇಶಕರ ಕಾಂಭಿನೇಷನ್ ನಲ್ಲಿ ‘ರಾಮನ ಸವಾರಿ ‘ ಬರುತ್ತಿದೆ. ಇದೊಂದು 1964ರಿಂದ 1972ರ ಕಾಲಘಟ್ಟದಲ್ಲಿ ನಡೆಯುವ ಈ ಕಥೆಯನ್ನು ಒಳಗೊಂಡಿದ್ದು, ಚಿತ್ರಕ್ಕೆ ಕಥೆಯನ್ನು ಸಾಹಿತಿ ಕೆ. ಸದಾಶಿವ ಬರೆದಿದ್ದಾರೆ.

ಗಂಡ-ಹೆಂಡತಿ ನಡುವಿನ ವೈಮನಸ್ಸಿನ ಕಾರಣಕ್ಕೆ ಮಗು ಹೇಗೆ ಮಾನಸಿಕವಾಗಿ ತೊಂದರೆಗೆ ಸಿಲುಕುತ್ತದೆ ಎಂಬುದು ‘ರಾಮನ ಸವಾರಿ’ ಚಿತ್ರದ ಸಾರಾಂಶ. ಈ ಚಿತ್ರಕ್ಕಾಗಿ ಕಾಸರವಳ್ಳಿ ಅವರು ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ.

ಸಂತಸಗೊಂಡ ಸೋನು

ಈ ಚಿತ್ರದಲ್ಲಿ ನಟಿಸುತ್ತಿರುವುದಕ್ಕೆ ಸೋನು ಗೌಡ ಸಂತಸಗೊಂಡಿದ್ದಾರೆ. “ಎರಡನೇ ಬಾರಿಗೆ ಶಿವರುದ್ರಯ್ಯ ಮತ್ತು ನಾನು ಜತೆಯಾಗಿ ಕೆಲಸ ಮಾಡುತ್ತಿರುವುದರಿಂದ ನಮ್ಮ ನಡುವೆ ಒಳ್ಳೆಯ ಹೊಂದಾಣಿಕೆ ಇದೆ. ಈ ಚಿತ್ರದಲ್ಲಿ ಜೋರಾಗಿ ಮಾತನಾಡುವ ಮಹಿಳೆಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ” ಎನ್ನುತ್ತಾರೆ.

Tags