ಸುದ್ದಿಗಳು

ಶುರುವಾಯಿತು ‘ವಿಲನ್’ ಹವಾ: ಜಿ.ಟಿ ಮಾಲ್ ಮುಂದೆ ಹಾರ, ನೋಟು, ಹಾಲು ಹಾಕಿ ಸಂಭ್ರಮಿಸಿದ ಶಿವಣ್ಣನ ಅಭಿಮಾನಿಗಳು

;ದಿ ವಿಲನ್’ ಚಿತ್ರದ ಬಿಡುಗಡೆಗೆ ಎಲ್ಲರೂ ಕಾಯುತ್ತಿದ್ದಾರೆ

ಚಂದನವನದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ‘ದಿ ವಿಲನ್’ ಗಣೇಶ್ ಹಬ್ಬದಂದು ತೆರೆ ಕಾಣುವುದು ಗ್ಯಾರಂಟಿ ಎಂಬ ಮಾತುಗಳು ಕೇಳಿ ಬರುತ್ತಿವೆ.

ಬೆಂಗಳೂರು, ಸ. 05: ಪ್ರೇಮ್ ನಿರ್ದೇಶನದ ‘ದಿ ವಿಲನ್’ ಚಿತ್ರದ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಚಿತ್ರದ ಬಿಡುಗಡೆಗಾಗಿ ಸಕಲ ರೀತಿಯ ತಯಾರಿಯನ್ನು ಚಿತ್ರತಂಡ ಮಾಡಿಕೊಳ್ಳುತ್ತಿದೆ. ಅದಕ್ಕಾಗಿ ನಿರ್ದೇಶಕ ಪ್ರೇಮ್ ರಾಜ್ಯಾದ್ಯಂತ ಮುಂಗಡವಾಗಿ ಬುಕಿಂಗ್ ವ್ಯವಸ್ಥೆಯನ್ನು ಕೂಡ ಗೌರಿ ಗಣೇಶ ಹಬ್ಬದಂದು ಪ್ರಾರಂಭಿಸಲಿದ್ದಾರೆ.

ಸಪ್ಟೆಂಬರ್ 13 ಅಥವಾ 21

ಎಲ್ಲವೂ ಅಂದುಕೊಂಡಂತಾದರೆ, ಗಣೇಶ್ ಹಬ್ಬದಂದು ಅಥವಾ, ಅದರ ಮುಂದಿನ ವಾರ ಅಂದರೆ ಸೆ. 21 ರಂದು ದಿ ವಿಲನ್ ಬಿಡುಗಡೆ ಬಹುತೇಕ ಖಚಿತವಾಗಿದೆ. ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಶಿವಣ್ಣನ ಅಭಿಮಾನಿಗಳು ನಿನ್ನೆ ರಾತ್ರಿ ಮಾಗಡಿ ರಸ್ತೆಯಲ್ಲಿರುವ ಜಿ.ಟಿ ವರ್ಲ್ಡ್ ಮಾಲ್ ಮುಂದೆ ಶಿವಣ್ಣ ಪೋಸ್ಟರ್ ಗೆ ದುಡ್ಡಿನ ಹಾರ ಹಾಕಿ, ಪಟಾಕಿ ಸಿಡಿಸಿದ್ದಾರೆ.

ಇಬ್ಬರು ಸ್ಟಾರ್ ಗಳ ಚಿತ್ರ

ಇದೇ ಮೊದಲ ಬಾರಿಗೆ ಶಿವಣ‍್ಣ ಮತ್ತು ಕಿಚ್ಚ ಸುದೀಪ್ ಒಟ್ಟಿಗೆ ಅಭಿನಯಿಸಿದ್ದಾರೆ. ಈಗಾಗಲೇ ಹಾಡುಗಳು ಹಿಟ್ ಆಗಿವೆ. ಚಿತ್ರದ ಬಗ್ಗೆ ಅಭಿಮಾನಿಗಳು ಸೇರಿದಂತೆ, ಸಿನಿಪ್ರೇಮಿಗಳು ಮತ್ತು ಸಿನಿಮಾದವರೂ ಸಹ ಈ ಚಿತ್ರಕ್ಕಾಗಿ ಕಾಯುತ್ತಿದ್ದಾರೆ.

ಥ್ರೀಡಿ ಹೋಲ್ಡಿಂಗ್ ಕಟೌಟ್ ಗಳು

ಚಿತ್ರದ ಹೋಲ್ಡಿಂಗ್ ಹಾಗೂ ಥ್ರೀಡಿ ಪೋಸ್ಟರ್ ಈಗ ರಾಜ್ಯದ ಸಿಂಗಲ್ ಸ್ಕ್ರೀನ್ ಗಳಲ್ಲಿ ಮತ್ತು ಮಾಲ್ ಗಳಲ್ಲಿ ಪ್ರದರ್ಶಿಸಲು ಸಿದ್ದವಾಗುತ್ತಿವೆ. ಅಭಿಮಾನಿಗಳ ಈ ಸಂಭ್ರಮದ ಕ್ಷಣಗಳು ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ಪಡೆಯುತ್ತಿವೆ.

Tags