ಸುದ್ದಿಗಳು

ಈ ವಾರ ಬರೋಬ್ಬರಿ 10 ಚಿತ್ರಗಳು ಬೆಳ್ಳಿತೆರೆಗೆ…!!!

ಈ ವಾರ ಸಿನಿಮಾ ನೋಡುವವರಿಗೆ ದೊಡ್ಡ ಸವಾಲು ಎದುರಾಗಿದೆ. ಕಾರಣ, ಈ ವಾರ ಒಂದಲ್ಲಾ ಎರಡಲ್ಲಾ ಬರೋಬ್ಬರಿ 10 ಹತ್ತು ಚಿತ್ರಗಳು ಬೆಳ್ಳಿ ಪರದೆಯನ್ನು ಹಂಚಿಕೊಳ್ಳುತ್ತಿವೆ. ಈ ಮೂಲಕ ಸಿನಿ ಪ್ರೇಮಿಗಳಿಗೆ ಹಬ್ಬದ ವಾತಾವರಣವನ್ನು ಉಂಟು ಮಾಡುವುದರೊಂದಿಗೆ ದಾಖಲೆಯನ್ನೂ ಮಾಡುತ್ತಿವೆ.

ಬೆಂಗಳೂರು, ಆ. 09: ಇನ್ನೇನು ಆಷಾಡ ಕಳೆದು ಶ್ರಾವಣ ಮಾಸ ಶುರುವಾಗುತ್ತಿದೆ. ಈ ಹಿನ್ನಲೆಯಲ್ಲಿ ಸಾಲು ಸಾಲು ಚಿತ್ರಗಳು ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿವೆ. ಈ ಪೈಕಿ ಹೊಸಬರ ಚಿತ್ರಗಳದ್ದೇ ಕಾರುಬಾರು ಎಂಬುದು ವಿಶೇಷ.ಇನ್ನು ಈ ವಾರ ಪ್ರೇಕ್ಷಕರಿಗೊಂದು ಹೊಸ ಸವಾಲು ಎದುರಾಗಿದೆ. ಏಕೆಂದರೆ ಈ ವಾರ ಬರೋಬ್ಬರಿ 10 ಹತ್ತು ಚಿತ್ರಗಳು ಬಿಡುಗಡೆಯಾಗುತ್ತಿವೆ. ಹೀಗಾಗಿ ಯಾವ ಚಿತ್ರವನ್ನ ಬಿಡುವುದು ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಇನ್ನು ಸಿನಿಮಾಗಳನ್ನು ನೋಡುವುದಕ್ಕೆ ಪ್ರೇಕ್ಷಕರ ಕೊರತೆಯಿದೆ ಎಂಬ ಮಾತುಗಳ ನಡುವೆ, ಇಷ್ಟೊಂದು ಚಿತ್ರಗಳು ಬರುತ್ತಿರುವುದರಿಂದ ಯಾವ ಸಿನಿಮಾ ಏನಾಗಲಿದೆ ಎಂದು ಸುಲಭವಾಗಿ ಹೇಳಲು ಸಾಧ್ಯವಿಲ್ಲ.

ಸಂಚಾರಿ ವಿಜಯ್ ಅಭಿನಯದ ‘ಪಾದರಸ’ ಬಿಟ್ಟರೆ, ಉಳಿದಂತೆ ಬಹುತೇಕ ಹೊಸಬರ ಚಿತ್ರಗಳೇ ತೆರೆಗೆ ಬರುತ್ತಿವೆ. “ಅಭಿಸಾರಿಕೆ’, “ಅತಂತ್ರ’,”ಹೊಸ ಕ್ಲೈಮ್ಯಾಕ್ಸ್’,”ಲೌಡ್ ಸ್ಪೀಕರ್’, “ಪುಟ್ಟರಾಜು ಲವ್ವರ್ ಆಫ್ ಶಶಿಕಲಾ’, ವಂದನ’, “ಕತ್ತಲೆ ಕೋಣೆ’ ಮತ್ತು ಮಕ್ಕಳ ಚಿತ್ರ “ರಾಮ ರಾಜ್ಯ’ ಚಿತ್ರಗಳು ಬಿಡುಗಡೆಯಾಗುತ್ತಿವೆ.

1 ಪಾದರಸ: ಸಂಚಾರಿ ವಿಜಯ್ ತುಸು ಪೋಲಿಯಾಗಿರುವ ಈ ಚಿತ್ರಕ್ಕೆ ವೈಷ್ಣವಿ ಮತ್ತು ಮನಸ್ವಿ ನಾಯಕಿಯರಾಗಿದ್ದು, ಹೃಷಿಕೇಶ್ ಜಂಭಗಿ ನಿರ್ದೇಶನ ಮಾಡಿದ್ದಾರೆ. ಆರ್ಟ್ ಅಂಡ್ ಸೋಲ್ ಮಿಡಿಯಾ ಸರ್ವಿಸ್ ಲಾಂಛನದಲ್ಲಿ ‘ಪಾದರಸ’ ಚಿತ್ರ ನಿರ್ಮಾಣವಾಗಿದ್ದು,ಎ. ಟಿ ರವೀಶ್ ಸಂಗೀತ ನಿರ್ದೇಶನವಿದೆ.

2 ಪುಟ್ಟರಾಜು-ಲವ್ವರ್ ಆಫ್ ಶಶಿಕಲಾ: ತುಮಕೂರು ಬಳಿ ನಡೆದ ನೈಜ ಘಟನೆಯೊಂದನ್ನು ಕಥೆಯನ್ನಾಗಿಸಿಕೊಂಡು ಈ ಚಿತ್ರವನ್ನು ಮಾಡಿದ್ದಾರೆ ನಿರ್ದೇಶಕ ಸಹದೇವ್. ಚಿತ್ರದಲ್ಲಿ ಹೊಸ ಪ್ರತಿಭೆಗಳಾದ ಅಮಿತ್, ಜಯಶ್ರೀ ಆರಾಧ್ಯ ಮತ್ತು ಸುಷ್ಮಿತಾ ಸಿದ್ದಪ್ಪ ಸೇರಿದಂತೆ ಮುಂತಾದವರು ನಟಿಸಿದ್ದಾರೆ. ಈಗಾಗಲೇ ಟ್ರೇಲರ್ ಮತ್ತು ಹಾಡುಗಳ ಮೂಲಕ ಗಮನ ಸೆಳೆದಿರುವ ಈ ಚಿತ್ರಕ್ಕೆ ನಾಗರಾಜು ಮತ್ತು ರಾಜು ಬಾಲಕೃಷ್ಣ ಬಂಡವಾಳ ಹೂಡಿದ್ದಾರೆ.

3 ಲೌಡ್ ಸ್ಪೀಕರ್: ಈ ಹಿಂದೆ ‘ಮಳೆ’ ಮತ್ತು ‘ಧೈರ್ಯಂ’ ಚಿತ್ರಗಳನ್ನು ನಿರ್ದೇಶಿಸಿದ್ದ ಶಿವ ತೇಜಸ್ ಇದೀಗ ‘ಲೌಡ್ ಸ್ಪೀಕರ್’ ಹಿಡಿದು ಬಂದಿದ್ದಾರೆ. ಸಸ್ಪೆನ್ಸ್ ರೀತಿಯಲ್ಲಿ ಮೂಡಿ ಬಂದಿರುವ ಈ ಚಿತ್ರದಲ್ಲಿ ಹೊಸ ಕಲಾವಿದರೇ ಪಾತ್ರಧಾರಿಗಳಾಗಿದ್ದಾರೆ. ಪ್ರತಿ ಮನುಷ್ಯನಲ್ಲೂ ಗೌಪ್ಯವಾದ ವಿಷಯಗಳಿರುತ್ತವೆ. ಅದನ್ನೇ ವಿಷಯ ವಸ್ತುವನ್ನಾಗಿಸಿಕೊಂಡು ‘ಲೌಡ್ ಸ್ಪೀಕರ್’ ಕಟ್ಟಿ ಕೊಟ್ಟಿದ್ದಾರೆ. ಚಿತ್ರಲ್ಲಿ ಅಭಿಶೇಕ್, ದಿಶಾ ದಿನಕರ್, ವಿಜಯ್, ಸುಮಂತ್ ಭಟ್, ಭಾಸ್ಕರ್ ‘ನೀನಾಸಂ’ , ರಂಗಾಯಣ ರಘು ಸೇರಿದಂತೆ ಅನೇಕರು ಪಾತ್ರವರ್ಗದಲ್ಲಿದ್ದಾರೆ. ಕೆ.ರಾಜು ಅವರ ನಿರ್ಮಾಣದ ಈ ಚಿತ್ರಕ್ಕೆ ಹರ್ಷವರ್ಧನ್ ಸಂಗೀತ, ಕಿರಣ್ ಹಂಪಾಪುರ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನವಿದೆ.

4 ರಾಮರಾಜ್ಯ : ಮಕ್ಕಳನ್ನೇ ಪ್ರಧಾನವಾಗಿಸಿಕೊಂಡು ಗಾಂಧಿ ಕನಸಿಂತೆ ‘ರಾಮರಾಜ್ಯ’ ಕಟ್ಟಲು ನಿರ್ದೇಶಕ ನೀಲ್ ಕೆಂಗಾಪುರ ಸಿದ್ಧರಾಗಿದ್ದಾರೆ. ಈಗಾಗಲೇ ಹಲವು ಸಿನಿಮೋತ್ಸವಗಳಲ್ಲಿ ಪ್ರದರ್ಶನ ಕಂಡಿರುವ ಈ ಚಿತ್ರದಲ್ಲಿ ‘ನೆನಪಿರಲಿ’ ಪ್ರೇಮ್ ಪುತ್ರ ಏಕಾಂತ್ ಸಹ ನಟಿಸಿದ್ದಾರೆ. ‘ಗಾಂಧಿ ತಾತನ ಕನಸು’ ಎಂಬ ಅಡಿಬರಹವಿರುವ ಈ ಚಿತ್ರಕ್ಕೆ ಶಂಕರ್ ಗೌಡ ಬಂಡವಾಳ ಹೂಡಿದ್ದಾರೆ.

5 ಅಭಿಸಾರಿಕೆ: ಮಧುಸೂದನ್ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರವು ಇದೇ ವಾರ ಬರುತ್ತಿದೆ. ಭಾಗ್ಯಲಕ್ಷ್ಮೀ ಪ್ರೊಡಕ್ಷನ್ ಲಾಂಛನದಲ್ಲಿ ಶಿವಕುಮಾರ್ ಕೆ, ಮಧುಸೂದನ್ ಎ.ಎಸ್ ಮತ್ತು ಪ್ರಶಾಂತ್ ಕೊಡಗೆದಾರ್ ಅವರು ಈ ಚಿತ್ರವನ್ನ ನಿರ್ಮಿಸಿದ್ದಾರೆ. ಕರುಣ್ ಬಿ ಕೃಪ ಸಂಗೀತ ನೀಡಿರುವ ಈ ಚಿತ್ರದಲ್ಲಿ ಸೋನಾಲ್ ಮಾಂಟೆರೊ, ತೇಜ್, ಯಶ್ವಂತ್ ಶೆಟ್ಟಿ, ಅಶೋಕ್, ರಚನ, ಚಂದ್ರಕಲಾ ಮೋಹನ್, ಶಾಲಿನಿ(ಬಿಗ್ಬಾಸ್) ಕಾಣಿಸಿಕೊಂಡಿದ್ದಾರೆ.

6 ಹೊಸ ಕ್ಲೈಮ್ಯಾಕ್ಸ್: ಶ್ಯಾಲಿ ಕೊನಾರ್ಕ್ ಇಂಟರ್ ನ್ಯಾಷನಲ್ ಲಾಂಛನದಲ್ಲಿ ಡಾ||ಶ್ಯಾಲಿ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರದಲ್ಲಿ ನರೇಶ್ ಗಾಂಧಿ, ಅನಿತಾ ಭಟ್, ಡಾ||ಶ್ಯಾಲಿ, ಎಂ.ಡಿ.ಕೌಶಿಕ್, ಶರತ್ ಸೇರಿದಂತೆ ಅನೇಕರು ಅಭಿನಯಿಸಿದ್ದಾರೆ.ಚಿತ್ರಕ್ಕೆ ಮಾರುತಿ ಸಂಗೀತ, ಗೌರಿ ವೆಂಕಟೇಶ್ ಛಾಯಾಗ್ರಹಣ, ಅರುಣ್ ಥಾಮಸ್ ಅವರ ಸಂಕಲನವಿದೆ.

7 ಕತ್ತಲಕೋಣೆ: ಇದೊಂದು ಭಯಾನಕ ಚಿತ್ರವಾಗಿದ್ದು, ಚಿತ್ರದ ಶೀರ್ಷಿಕೆಗೆ ‘ಇಲ್ಲಿ ಭಾವನೆಗಳಿಗೆ ಬೆಲೆ ಇಲ್ಲ’ ಎಂಬ ಅಡಿಬರಹವಿದೆ. ಸಂದೇಶ್ ಶೆಟ್ಟಿ ನಿರ್ದೇಶನದ ಚಿತ್ರಕ್ಕೆ ಅವರೇ ನಾಯಕರಾಗಿ ನಟಿಸಿದ್ದಾರೆ. ಹನಿಕಾ ರಾವ್ ನಾಯಕಿಯಾಗಿದ್ದಾರೆ. 1993ರ ಸಮಯದಲ್ಲಿ ಮಲೆನಾಡಿನಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿ ಸಿನಿಮಾ ಮಾಡಿದ್ದಾರೆ ನಿರ್ದೇಶಕರು.

8 ವಂದನ: ನಿಷ್ಮ ಕ್ರಿಯೇಷನ್ಸ್ ನಿರ್ಮಾಣದಲ್ಲಿ ತಯಾರಾಗಿರುವ ಈ ಚಿತ್ರಕ್ಕೆ “ನಾ ನಿನ್ನ ಬಿಡಲಾರೆ’ ಎಂಬ ಅಡಿಬರಹವಿದೆ. ವಿಜೇತ್ ಎಂಬುವವರು ಈ ಚಿತ್ರದ ನಿರ್ದೇಶನ ಮಾಡಿದ್ದಾರೆ. ಇದೊಂದು ಮಹಿಳಾ ಪ್ರಾಧ್ಯಾನಿತ ಚಿತ್ರವಾಗಿದ್ದು, ಶೋಭಿತಾ ಮುಖ್ಯ ಭೂಮಿಕೆ ಕಾಣಿಸಿಕೊಂಡಿದ್ದಾರೆ. ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದ ನಟ ಅರುಣ್ಕುಮಾರ್ ಶೋಭಿತಾಗೆ ಜೋಡಿಯಾಗಿದ್ದಾರೆ.

9 ಅತಂತ್ರ: ಇಸಾಕ್ ಖಾಜೀ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ‘ಅತಂತ್ರ’ ಚಿತ್ರವು ಅನ್ ಕುಲ್ ಪ್ರೊಡಕ್ಷನ್ ಲಾಂಛನದಲ್ಲಿ ಬಿ.ಪಿ.ಸಿಂಗ್ ಅವರು ನಿರ್ಮಿಸಿದ್ದಾರೆ. ಚಿತ್ರವು ಉತ್ತರ ಕರ್ನಾಟಕದಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿದ್ದು, ಇಸಾಕ್ ಖಾಜೀ, ಭೂಮಿಕ, ರಾಧಾರಾಮಚಂದ್ರ, ವಿಶ್ವನಾಥ್, ಅನಿಲ್ಕುಮಾರ್ ಸೇರಿದಂತೆ ಅನೇಕರು ಬಣ್ಣ ಹಚ್ಚಿದ್ದಾರೆ.

10 ಸಾವಿತ್ರಿ ಬಾಯಿ ಪುಲೆ: ಭಾರತದ ,ಮೊಟ್ಟ ಮೊದಲ ಶಿಕ್ಷಕಿ ಎಂದು ಕರೆಯುವ ಸಾವಿತ್ರಿಬಾಯಿ ಪುಲೆ ಅವರ ಜೀವನವನ್ನು ಆಧರಿಸಿದ ಈ ಚಿತ್ರದಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ನಟಿ ತಾರಾ ನಟಿಸಿದ್ದಾರೆ. ಅಲ್ಲದೇ ಈ ಚಿತ್ರದಲ್ಲಿ ಸಾವಿತ್ರಿ ಬಾಯಿ ಪುಲೆ ಪತಿಯಾಗಿ ಸುಚೇಂದ್ರಪ್ರಸಾದ್ ನಟಿಸಿದ್ದಾರೆ. ಬಸವರಾಜ್ ಡಿ ಭೂತಾಳಿ ಈ ಚಿತ್ರಕ್ಕೆ ಹಣ ಹೂಡಿದ್ದಾರೆ.
ಈ ಎಲ್ಲಾ ಚಿತ್ರಗಳಿಗೂ ಶುಭವಾಗಲಿ…

 

@ ಸುನೀಲ ಜವಳಿ

Tags

Related Articles