ಸುದ್ದಿಗಳು

ಈ ವಾರ ಒಟ್ಟು 5 ಚಿತ್ರಗಳು ಬೆಳ್ಳಿತೆರೆಯನ್ನು ಅಲಂಕರಿಸಲಿವೆ

ಪ್ರತಿವಾರದಂತೆ ಈ ವಾರವೂ ಸಹ ಒಟ್ಟು 5 ಚಿತ್ರಗಳು ತೆರೆ ಕಾಣುತ್ತಿವೆ. ಈ ಎಲ್ಲಾ ಐದು ಚಿತ್ರಗಳು ಒಂದಲ್ಲಾ ಒಂದು ಕಾರಣಗಳಿಂದ ನಿರೀಕ್ಷೆಯನ್ನು ಹುಟ್ಟು ಹಾಕಿವೆ. ‘ಕುಮಾರಿ 21 ಎಫ್’ ಚಿತ್ರದ ಮೂಲಕ ಡೈನಾಮಿಕ್ ಸ್ಟಾರ್ ದೇವರಾಜ್ ಅವರ ದ್ವಿತಿಯ ಸುಪುತ್ರ ‘ಪ್ರಣಾಮ್’ ಚಿತ್ರರಂಗಕ್ಕೆ ಎಂಟ್ರಿಯಾಗುತ್ತಿದ್ದಾರೆ. ‘ಅಕಿರಾ’ ಚಿತ್ರದ ಯಶಸ್ಸಿನ ನಂತರ ಅನಿಶ್ ಅವರ ‘ವಾಸು..’ ಚಿತ್ರವು ತೆರೆಗೆ ಬರುತ್ತಿದೆ. ತುಂಬಾ ದಿನಗಳ ನಂತರ ದಿಗಂತ್ ಅವರ ಚಿತ್ರವೊಂದು ತೆರೆ ಕಾಣುತ್ತಿದ್ದು , ಹೊಸಬರ ಚಿತ್ರಗಳಾದ ‘ಸ್ಟೇಟ್ ಮೆಂಟ್’ ಹಾಗೂ ‘ಥಿಯರಿ’ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿವೆ.

1 ಕುಮಾರಿ 21 ಎಫ್ : ವಿದೇಶದ ಕ್ರೂಸರ್ ನ ರೆಸ್ಟೊರೆಂಟ್ ನಲ್ಲಿ ಶೆಪ್ ಆಗೋ ಕನಸು ಹೊತ್ತ ಹುಡುಗ ಮತ್ತು ಆತನ ಬದುಕಿಗೆ ಪ್ರವೇಶವಾಗುವ ಬಿಂದಾಸ್ ಹುಡುಗಿಯ ಸುತ್ತ ನಡೆಯುವ ಕಥೆಯನ್ನು ಒಳಗೊಂಡಿದೆ ಈ ಚಿತ್ರ. ಚಿತ್ರದಲ್ಲಿ ಪ್ರಣಾಮ್ ಅವರೊಂದಿಗೆ ನಿಧಿ ಕುಶಾಲಪ್ಪ ನಟಿಸಿದ್ದಾರೆ. ಸ್ಟ್ರೋಮ್ ಪಿಕ್ಚರ್ಸ್ ಅರ್ಪಿಸುವ ಈ ಚಿತ್ರವನ್ನು ಹಯಗ್ರೀವ ಕಲಾಚಿತ್ರ ಪ್ರೊಡಕ್ಷನ್ ಹೌಸ್ನಿಂದ ಸಂಪತ್ ಕುಮಾರ್ ಮತ್ತು ಶ್ರೀಧರ್ ರೆಡ್ಡಿ ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಶ್ರೀಮನ್ ವೇಮುಲ ನಿರ್ದೇಶನ ಮಾಡಿದ್ದಾರೆ.

2 ಕಥೆಯೊಂದು ಶುರುವಾಗಿದೆ: ಸೆನ್ನಾ ಹೆಗ್ಡೆ ನಿರ್ದೇಶನದ ‘ಕಥೆಯೊಂದು ಶುರುವಾಗಿದೆ’ ಚಿತ್ರವು ನಾಲ್ಕು ದಿನದಲ್ಲಿ ನಡೆಯುವ ಕಥೆಯನ್ನು ಒಳಗೊಂಡಿದೆ. ಸೋಮವಾರ ಆರಂಭವಾಗಿ ಗುರುವಾರ ಮುಗಿಯುತ್ತದೆ. ಪ್ರತಿಯೊಬ್ಬರ ಜೀವನದಲ್ಲಿ ಬರುವ ಕಥೆಯನ್ನು ಹಾಸ್ಯಭರಿತವಾಗಿ ಮನ ಮುಟ್ಟುವ ರೀತಿ ಹೇಳಲಾಗಿದೆಯಂತೆ. ಚಿತ್ರದಲ್ಲಿ ದಿಗಂತ್ ರೆಸಾರ್ಟ್ ಮಾಲಿಕನಾಗಿ ಮದುವೆ ವಯಸ್ಸಿಗೆ ಬಂದಿರುವ ಯುವಕನ ಪಾತ್ರ ಮಾಡಿದ್ದಾರೆ. ಚಿತ್ರದಲ್ಲಿ 20 ರಿಂದ 21ರ ಒಂದು ಜೋಡಿ, 30ರ ಯುವಕ, ಹಾಗೇ 60 ರ ಒಂದು ಜೋಡಿ ಹಾಗೂ ಅವರ ಜೀವನದ ಜೊತೆ ಕಥೆ ಸಾಗುತ್ತದೆಯಂತೆ..

3 ಥಿಯರಿ: ಜೀವಿತ ಕ್ರಿಯೇಷನ್ಸ್ ಬ್ಯಾನರ್ ನ ಅಡಿಯಲ್ಲಿ ಈ ಚಿತ್ರವು ನಿರ್ಮಾಣಗೊಂಡಿದ್ದು, ಪವನ್ ಶಂಕರ್ ಅವರು ಕಥೆ ಚಿತ್ರಕಥೆ ಬರೆದು ಇದೇ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದಾರೆ. ಚಿತ್ರದ ಪ್ರಮುಖ ಪಾತ್ರದಲ್ಲಿ ಮೂರು ಜನ ನಾಯಕರು ದೀಪಕ್ ಗೌಡ, ಯಧು ಶ್ರೇಷ್ಠ,ಸಂತೋಷ್ ಪ್ರಭು, ಕಾಣಿಸಿಕೊಂಡಿದ್ದು, ನಾಯಕಿಯಾಗಿ ತೇಜಸ್ವಿನಿ ಸ್ಕ್ರೀನ್ ಶೇರ್ ಮಾಡಿದ್ದಾರೆ.

4 ಸ್ಟೇಟ್ ಮೆಂಟ್: ಈ ಚಿತ್ರವು ನೋಟ್ ಬ್ಯಾನ್ ಕುರಿತ ಕಥೆಯನ್ನು ಒಳಗೊಂಡಿದ್ದು ಅಪ್ಪಿ ಪ್ರಸಾದ್ ನಿರ್ದೇಶನ ಮಾಡಿದ್ದಾರೆ. ಪ್ರಧಾನಿ ಮೋದಿಯವರು ನೋಟ್ ಬ್ಯಾನ್ ಮಾಡಿದ ಸಂದರ್ಭ ಹಾಗೂ ಆ ವೇಳೆ ಜನರು ಅನುಭವಿಸಿದ ತೊಂದರೆಗಳನ್ನು ಚಿತ್ರದಲ್ಲಿ ತೋರಿಸಲಾಗಿದೆ. ವೇಣು ಹೆಚ್.ಕೆ ರವರು ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

5 ವಾಸು- ನಾನು ಪಕ್ಕಾ ಕಮರ್ಶಿಯಲ್ : ನಾಯಕ ಅನಿಶ್ ಅವರು ನಟಿಸಿ, ನಿರ್ಮಿಸಿರುವ ಈ ಚಿತ್ರವನ್ನು ಅಜಿತ್ ವಾಸನ್ ಉಗ್ಗಿನಾ ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ಛಾಯಾಗ್ರಹಣ ದಿಲಿಪ್ ಚಕ್ರವರ್ತಿ, ಸಂಗೀತ ಅಜನೀಶ್ ಲೋಕನಾಥ, ಸಂಕಲನ ಶ್ರೀಕಾಂತ್, ಸಾಹಸ ವಿಕ್ರಂ ಮೋರ್, ನೃತ್ಯ ಬಾಬಾ ಭಾಸ್ಕರ್, ಶೇಖರ್, ಶರತ್ಗೌಡ ಕಾರ್ಯಕಾರಿ ನಿರ್ಮಾಪಕರಾಗಿರುವ ಈ ಚಿತ್ರದಲ್ಲಿ ಅನೀಶ್ ತೇಜೇಶ್ವರ್, ನಿಶ್ವಿಕಾ ನಾಯ್ಡು, ಅವಿನಾಶ್, ಮಂಜುನಾಥ ಹೆಗಡೆ, ಅರುಣ ಬಾಲರಾಜ್, ಗಿರೀಶ್, ದೀಪಕ್ ಶೆಟ್ಟಿ ಸೇರಿದಂತೆ ಮುಂತಾದವರಿದ್ದಾರೆ.

ಈ ಎಲ್ಲಾ ಚಿತ್ರಗಳಿಗೂ ಶುಭವಾಗಲಿ.

 

@ sunil Javali

Tags