ಸುದ್ದಿಗಳು

ಈ ವಾರ ಎರಡು + ಒಂದು= ಮೂರು ಚಿತ್ರಗಳು ತೆರೆಗೆ

ಪ್ರತಿವಾರದಂತೆ ಈ ವಾರವೂ ಸಹ ಮೂರ್ನಾಲ್ಕು ಚಿತ್ರಗಳು ತೆರೆ ಕಾಣಬೇಕಾಗಿತ್ತು. ಆದರೆ ಕೆಲ ಅನಿವಾರ್ಯ ಕಾರಣಗಳಿಂದ ಎರಡು ಚಿತ್ರಗಳು ಮಾತ್ರ ತೆರೆ ಕಾಣುತ್ತಿವೆ. ಹಾಗೂ ಈ ಎರಡೂ ಚಿತ್ರಗಳೂ ಸಹ ಹೊಸಬರದ್ದು ಆದರೆ ಇವರೊಂದಿಗೆ ಹಳಬರಾದ ನವರಸ ನಾಯಕ ಜಗ್ಗೇಶ್ ಅವರ ನೀರ್ದೋಸೆ ಸಹ ಮರು ಬಿಡುಗಡೆ ಕಾಣುತ್ತಿರುವುದು ವಿಶೇಷ.

1 ಶತಾಯ ಗತಾಯ : “ಜಸ್ಟ್ ಪಾಸ್’ ಚಿತ್ರದಲ್ಲಿ ನಾಯಕನಾಗಿದ್ದ ರಘು ರಾಮಪ್ಪನಾಯಕನಾಗ ನಟಿಸಿದ್ದು, ಸೋನು ಗೌಡ ನಾಯಕಿಯಾಗಿದ್ದಾರೆ. ಅವರ ಜೊತೆಗೆ ಶಿವಪ್ರದೀಪ್, ಕುರಿ ಪ್ರತಾಪ್, ಗೋವಿಂದೇಗೌಡ ಮುಂತಾದವರು ನಟಿಸಿದ್ದಾರೆ. ಸಂದೀಪ್ ಈ ಚಿತ್ರವನ್ನು ನಿರ್ದೇಶಿಸಿರುವುದಷ್ಟೇ ಅಲ್ಲ, ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆಯುವುದರ ಜೊತೆಗೆ, ಚಿತ್ರ ನಿರ್ಮಿಸಿ, ಅದರಲ್ಲೊಂದು ಪಾತ್ರವನ್ನೂ ನಿರ್ವಹಿಸಿದ್ದಾರೆ. ಇನ್ನು “ಕೌರವ’ ವೆಂಕಟೇಶ್, ಈ ಚಿತ್ರಕ್ಕೆ ಸಾಹಸ ಸಂಯೋಜಿಸಿದ್ದಾರೆ. ಇದು ಹಳ್ಳಿಯೊಂದರಲ್ಲಿ ನಡೆಯುವ ಸತ್ಯ ಘಟನೆ ಆಧಾರಿತ ಚಿತ್ರ ಎಂದು ಚಿತ್ರತಂಡ ಹೇಳಿಕೊಂಡಿದೆ. ದ್ವೇಷ ಸಾಧನೆಗಾಗಿ ಕೊಲೆಗಳ ಸರಣಿ ನಡೆಯುತ್ತದೆಯಂತೆ. ಸಸ್ಪೆನ್ಸ್, ಥ್ರಿಲ್ಲರ್ ಇರುವ ಈ ಸಿನಿಮಾದ ಚಿತ್ರೀಕರಣ ಹಾಸನ ಜಿಲ್ಲೆಯ ಹಿರಿಸಾವೆ ಗ್ರಾಮದಲ್ಲಿ ನಡೆದಿದೆ.

2 ಶಿವು ಪಾರು ಚಿತ್ರ : ಶಿವು- ಪಾರು ಚಿತ್ರವನ್ನು ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ರಿಯಾಲಿಟಿ ಷೋ ಅನ್ನು ಆಧಾರವಾಗಿಟ್ಟುಕೊಂಡು ನಿರ್ಮಿಸಿರುವ ಪ್ರಯೋಗ ಚಿತ್ರ ಇದು. ಎಕ್ಸ್ ಪರಿಮೆಂಟಲ್ ಸಿನಿಮಾಗಳ ಸಾಲಿನಲ್ಲಿ ನಿಲ್ಲುವಂತಹ ಚಿತ್ರವಿದ್ದಾಗಿದ್ದು ಸುರೇಶ್ ಅವರು ನಿರ್ಮಿಸಿರುವ ಚಿತ್ರವನ್ನು ಶಶಾಂಕ್ರಾಜ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ದಿಶಾ ಪೂವಯ್ಯ, ಆಲಿಶಾ, ಚಿತ್ರಾ ಶೆಣೈ, ಹೊನ್ನವಳ್ಳಿ ಕೃಷ್ಣ, ರಮೇಶ್ ಭಟ್, ರೋಹಿಣಿ, ತರಂಗ ವಿಶ್ವ, ಭವ್ಯಾ, ರಂಜನ್ ತಾರಾಗಣದಲ್ಲಿದ್ದಾರೆ.

3 ನೀರ್ ದೋಸೆ ಚಿತ್ರ: ಅವಿವಾಹಿತ ಮಧ್ಯವಯಸ್ಕ ಜಗ್ಗೇಶ್ ಕುಮಾರ್ (ಜಗ್ಗೇಶ್) ಹೆಣ ಸಾಗಿಸುವ ವ್ಯಾನ್ ಡ್ರೈವರ್. ಬ್ರಹ್ಮಚಾರಿಯಾಗೇ ಉಳಿದ ವೃದ್ಧ ದತ್ತಾತ್ರೇಯ (ದತ್ತಣ್ಣ). ತನ್ನ ಸಡಿಲ ಸ್ವಭಾವದಿಂದ ಸೆಕ್ಸ್ ವರ್ಕರ್ ಆದ ಹುಡುಗಿ ಕುಮುದಾ (ಹರಿಪ್ರಿಯಾ). ಮೂಲಾ ನಕ್ಷತ್ರದಲ್ಲಿ ಹುಟ್ಟಿ ಮದುವೆಯಾಗದೆ ಉಳಿದ ಹುಡುಗಿ ಶಾರದಾ ಮಣಿ. ಈ ನಾಲ್ವರ ಬದುಕಿನ ಕತೆಯೇ ಇಡೀ ಸಿನಿಮಾ. ಸಿದ್ಲಿಂಗು ಖ್ಯಾತಿಯ ವಿಜಯ್ ಪ್ರಸಾದ್ ನಿರ್ದೇಶನ ಮಾಡಿದ್ದಾರೆ.

ಈ ಎಲ್ಲ ಚಿತ್ರಗಳಿಗೂ ಶುಭವಾಗಲಿ.

Tags