ಸುದ್ದಿಗಳು

‘ವೀ2’ ಇದು ಇಬ್ಬರದೇ ಸಿನಿಮಾ…!

ಸಿನಿಮಾ ರಂಗದ ಇತಿಹಾಸದಲ್ಲೇ ಯಾರೂ ಮಾಡಿರದ ಸಾಧನೆಯೊಂದನ್ನುಇಲ್ಲೊಂದು ಹೊಸಬರ ಚಿತ್ರವೊಂದು ಮಾಡಿದೆ. ಇದೀಗ ಸಿನಿಮಾ ರಂಗದಲ್ಲಿ ಏನನ್ನಾದರೂ ಸಾಧಿಸಬೇಕು ಅಂತಲೇ ಹಲವು ಮಂದಿ ಗಾಂಧಿನಗರವನ್ನು ಪ್ರವೇಶಿಸುತ್ತಾರೆ. ಆದರೆ ನಮ್ಮಿಂದ ಇದು ಸಾಧ್ಯವಿಲ್ಲ ಎಂದು ಕೈಚೆಲ್ಲುತ್ತಾರೆ. ಇವರ ಮಧ್ಯೆ ಅದೃಷ್ಟವಿರುವ ಕೆಲವರು ಮಾತ್ರ ಗಾಂಧಿನಗರದಲ್ಲಿ ಮಿಂಚುತ್ತಾರೆ. ಇದ್ಯಾವ ವಿಷಯ. ಗಾಂಧಿನಗರಕ್ಕೂ ಆಡುತ್ತಿರುವ ಮಾತಿಗೂ ಎತ್ತಣಿಂದೆತ್ತ ಸಂಬಂಧ ಅಂತ ಯೋಚಿಸುತ್ತಿದ್ದೀರಾ? ಖಂಡಿತವಾಗಿಯೂ ಸಂಬಂಧ ಇದೆ. ಯಾಕೆ ಅಂದರೆ ವೃತ್ತಿಯಲ್ಲಿ ಫ್ಯಾಷನ್ ಟೈಲರ್ ಆಗಿರುವ ಭಯಾನಕ ನಾಗ್ ಅವರು ನಿರ್ಮಿಸುತ್ತಿರುವ ಸ್ಯಾಂಡಲ್ ವುಡ್ ನಲ್ಲಿ ಧೂಳ್ ಎಬ್ಬಿಸಲು ಬರುತ್ತಿರುವ ಸಿನಿಮಾ V2..

ಒಂದು ಸಿನಿಮಾ ಅಂದರೆ ನಮ್ಮ ಕಣ್ಣ ಮುಂದೆ ಹಲವಾರು ಕಲಾವಿದರು ಸುಳಿದು ಹೋಗುತ್ತಾರೆ. ಆದರೆ ಇದು ಕೇವಲ ಇಬ್ಬರೇ ಕಲಾವಿದರನ್ನೊಳಗೊಂಡ ಸಿನಿಮಾ. ತೆರೆಗೆ ಬರಲು ಸದ್ದಿಲ್ಲದೆ ತಯಾರಿ ನಡೆಸುತ್ತಿದೆ. ಅದೇ ‘ವೀ2‘ ಸಿನಿಮಾ. ಮೈಸೂರಿನ ನಾಗರಾಜ್ ಅಲಿಯಾಸ್ ಭಯಾನಕ ನಾಗ, ಮತ್ತು ಕೃಷ್ಣನಾಗ್ ರವರು ನಿರ್ಮಿಸಿ, ನಿರ್ದೇಶಿಸಿ, ನಟಿಸುತ್ತಿರುವ ಚಿತ್ರದಲ್ಲಿ ಇಬ್ಬರೇ ಕಲಾವಿದರು ಜೊತೆಗೆ ತಂತ್ರಜ್ಞರೂ ಸಹ ಇವರಿಬ್ಬರೇ.

ಅಚ್ಚರಿಯೆನಿಸಿದರೂ ಇದು ಸತ್ಯ. ಕನ್ನಡ ಸಿನಿಮಾ ರಂಗದಲ್ಲಿ ಮೂಕಿ ಚಿತ್ರದ ಮೂಲಕ ಆ ಕಾಲದಲ್ಲಿ ಪುಷ್ಪಕವಿಮಾನ ಚಿತ್ರ ಹೆಸರು ಮಾಡಿತ್ತು. ಆದರೆ, ಮೈಸೂರಿನ ಕುವೆಂಪುನಗರದ ನಾಗರಾಜ್ ಹಾಗೂ ಕೃಷ್ಣನಾಗ್ ಇಬ್ಬರೇ ಕಲಾವಿದರು ತಂತ್ರಜ್ಞರಾಗಿಯೂ ಕೆಲಸ ಮಾಡಿ ಇದೀಗ ಸುದ್ದಿ ಮಾಡ ಹೊರಟಿದ್ದಾರೆ.

ನಟನೆಯ ಆಸಕ್ತಿ ಹಾಗೂ ಸಿನಿಮಾರಂಗದ ಅತಿಯಾದ ಪ್ರೀತಿಯಿಂದ ಭಯಾನಕ ನಾಗ್ ಅವರು ಸಿನಿಮಾ ನಿರ್ಮಿಸಬೇಕೆಂಬ ಕನಸು ಕಂಡು ತಮ್ಮ ಮಗಳ ಮದುವೆಗೆಂದು ಕೂಡಿಟ್ಟ ಹಣದಿಂದ ಈ ಚಿತ್ರ ನಿರ್ಮಿಸಲಾಗಿದೆಯಂತೆ

ಈ V2 ಚಿತ್ರಕ್ಕೆ 30 ಲಕ್ಷ ಹಣವನ್ನು ವೆಚ್ಚ ಮಾಡಲಾಗಿದೆ. ಮೈಸೂರು, ಚಾಮುಂಡಿ ಬೆಟ್ಟ, ಶ್ರೀರಂಗಪಟ್ಟಣ, ಕರಿಘಟ್ಟ ಸೇರಿದಂತೆ ಮೈಸೂರು ಸುತ್ತಮುತ್ತಲಲ್ಲಿ V2 ಚಿತ್ರವನ್ನು ಚಿತ್ರೀಕರಿಸಲಾಗಿದೆ. ವಿಶೇಷ ಅಂದರೆ, ಓರ್ವ ನಟನೆ ಮಾಡುವಾಗ, ಮತ್ತೊಬ್ಬ ಕಲಾವಿದ ಕ್ಯಾಮರಾದಲ್ಲಿ ಸೆರೆ ಹಿಡಿಯುತ್ತಾನೆ. ಮತ್ತೊಬ್ಬ ನಟನೆ ಮಾಡುವಾಗ ಇನ್ನೊರ್ವ ಕ್ಯಾಮರಾದಲ್ಲಿ ಸೆರೆ ಹಿಡಿಯುತ್ತಾನೆ. ಹೀಗೆ ಇಬ್ಬರೇ ಎಲ್ಲಾ ಕೆಲಸವನ್ನು ಮಾಡಿದ್ದಾರೆ. ಇಬ್ಬರೂ ಒಂದೇ ಫ್ರೇಮ್ ನಲ್ಲಿ ನಟನೆ ಮಾಡುವಾಗ ಕ್ಯಾಮರಾ ಮೂವ್ ಮೆಂಟ್ ಮಾಡಲು ಸಾರ್ವಜನಿಕರ ಸಹಾಯ ಪಡೆದಿದ್ದಾರೆ. ಅದು ಶೇ. 05 ರಷ್ಟು ಮಾತ್ರ.

ಹಣದ ಹಿಂದೆ ಬಿದ್ದು ಯಾವ ರೀತಿ ಜೀವನವನ್ನೇ ಕಳೆದುಕೊಳ್ಳುತ್ತಾರೆ ಎನ್ನುವ ಕುರಿತ ಚಿತ್ರ ಇದಾಗಿದ್ದು, ಅದನ್ನೇ ವಿಭಿನ್ನವಾಗಿ ಚಿತ್ರೀಕರಿಸಲಾಗಿದೆ. ಕಷ್ಟ ಹಾಗೂ ಮಾನಸಿಕ ಒತ್ತಡಕ್ಕೆ ಸಿಲುಕಿ, ವಾಮ ಮಾರ್ಗದ ಮೂಲಕ ಹಣ ಸಂಪಾದಿಸಲು ಹೋಗಿ ಏನೆಲ್ಲಾ ಕಷ್ಟ ಅನುಭವಿಸುತ್ತಾರೆ ಎನ್ನುವುದೇ ಈ ಚಿತ್ರದ ಸಾರಾಂಶವಾಗಿದೆ.

ಈ ಚಿತ್ರ ಗೆದ್ದೆ ಗೆಲ್ಲುತ್ತೆ. ಪ್ರೇಕ್ಷಕ ಪ್ರಭು ನಮ್ಮ ಕೈ ಹಿಡಿಯುತ್ತಾನೆ ಎಂಬ ನಂಬಿಕೆಯಿದೆ. ಚಿತ್ರ ಚೆನ್ನಾಗಿ ಮೂಡಿ ಬಂದಿದ್ದು, ಚಿತ್ರದಲ್ಲಿ ಹೊಡೆದಾಟ, ಬಡಿದಾಟ, ಮರಸುತ್ತುವ ಹಾಡುಗಳು ಏನೂ ಇಲ್ಲ. ಈ ಸಿನಿಮಾ ಕಾಮಿಡಿ, ಸಸ್ಪೆನ್ಸ್, ಹಾರಾರ್, ಥ್ರಿಲ್ಲರ್ ಸನ್ನಿವೇಶಗಳನ್ನು ಒಳಗೊಂಡಿದೆ.

ಈ ವೀ..ಟು. ಸಿನಿಮಾಗೆ ಸೆನ್ಸಾರ್ ಮಂಡಳಿಯಿಂದ “A” ಪ್ರಮಾಣಪತ್ರ ದೊರಕಿದ್ದು, ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರ ಅತ್ಯುತ್ತಮ ಸಾಲಿನಲ್ಲಿ ನಿಲ್ಲಲಿದೆ ಎಂಬ ವಿಶ್ವಾಸ ನಾಗರಾಜ್ ಹಾಗೂ ಕೃಷ್ಣನಾಗ್ ಅವರದ್ದು. ಇಷ್ಟೇ ಅಲ್ಲದೇ ಪ್ರಸಾದನ, ಸಂಕಲನ, ಡಬ್ಬಿಂಗ್, ಸಂಗೀತ, ಹೀಗೆ ತಾಂತ್ರಿಕ ಕೆಲಸವನ್ನು ಸಹ ಭಯಾನಕ ನಾಗ್ ಮತ್ತು ಕೃಷ್ಣನಾಗ್ ಮಾಡಿದ್ದಾರೆ. ಈ ರೀತಿಯ ವಿಶೇಷ ಪ್ರಯೋಗಾತ್ಮಕ ಚಿತ್ರ ಯಾವ ಭಾಷೆಯ ಚಿತ್ರದಲ್ಲೂ ಬಂದಿಲ್ಲವೆಂಬುದು V2 ಚಿತ್ರದ ವಿಶೇಷ.

ಹೊಸದಾದ ಪ್ರಯೋಗಾತ್ಮಕ ಚಿತ್ರವನ್ನು ಮೈಸೂರಿನ ನಾಗರಾಜ್ ಹಾಗೂ ಕೃಷ್ಣನಾಗ್ ಮಾಡ ಹೊರಟಿರುವ ಈ ಚಿತ್ರತಂಡಕ್ಕೆ ಶುಭವಾಗಲಿ.

Tags

Related Articles

Leave a Reply

Your email address will not be published. Required fields are marked *