ಬಾಲ್ಕನಿಯಿಂದಸಂದರ್ಶನಸುದ್ದಿಗಳು

ಪತ್ತೆದಾರಿ ಪ್ರತಿಭಾದಲ್ಲಿ ಡಾಕ್ಟರ್…

ಜೀ ಕನ್ನಡ ವಾಹಿನಿಯಲ್ಲಿ ಪತ್ತೆದಾರಿ ಪ್ರತಿಭಾ ಮೂಲಕ ಮನೆಮಾತಾಗಿರುವ ಧಾರಾವಾಹಿಯ ಡಾಕ್ಟರಾದ ವಲ್ಲಭ್ ಸೂರಿ, ತಮ್ಮ ಧಾರಾವಾಹಿಯ ಕ್ಲೀನಿಕ್ ಗೆ ಬಿಡುವು ಸಿಕ್ಕಾಗ ನಮ್ಮೊಂದಿಗೆ ಹರಟೆ ಹೊಡೆದ ಕ್ಷಣ ಹೀಗಿತ್ತು ನೋಡಿ…

 • ನಿಮ್ಮ ಹಿನ್ನಲೆ?

ಹುಟ್ಟಿ ಬೆಳೆದಿದ್ದು ಬೆಂಗಳೂರು ಮೂಲತಃ ರಂಗಭೂಮಿಯಿಂದ ಬಂದವನು. ಕಾಲೇಜು ದಿನಗಳಲ್ಲಿ ನಾಟಕಕ್ಕೆ ಸೇರಿದರೆ ಹಾಜರಾತಿ ಕೊಡುತ್ತಾರೆ ಎಂದು ಹೇಳಿದರು ಮುಂದೆ ರಂಗಸೌರಭ ಎನ್ನುವ ನಾಟಕ ತಂಡಕ್ಕೆ ಸೇರಿದೆ. ಸಿನಿಮಾ ಧಾರಾವಾಹಿಯಲ್ಲಿ ನಟಿಸುವ ಕನಸಿರಲಿಲ್ಲ. ನಮ್ಮ ನಾಟಕ ತಂಡದಲ್ಲಿ ಒಬ್ಬರು ಸೀತೆ ಧಾರಾವಾಹಿಗೆ ಆಡಿಷನ್ ಮಾಡುತ್ತಿದ್ದರು ನನಗೆ ಆಡಿಷನ್ ಕೊಡಲು ಒತ್ತಾಯಿಸಿದ್ದರಿಂದ ನಾನು ಭಾಗವಹಿಸಿ ಲಕ್ಷಣ ಪಾತ್ರಕ್ಕೆ ಆಯ್ಕೆಯಾಗುವ ಮೂಲಕ ನನ್ನ ಕಿರುತೆರೆ ಪ್ರಯಾಣ ಶುರುವಾಯಿತು.

 • ಕ್ಯಾಮರವನ್ನು ಮೊದಲ ಬಾರಿ ಎದುರಿಸಿದಾದ ಆದ ಅನುಭವ?

ತುಂಬಾ ಕಷ್ಟವಾಯಿತು. ರಂಗಭೂಮಿಯಲ್ಲಿ ಕೊಂಚ ಹಾವ ಭಾವ ಹೆಚ್ಚು ಹಾಗೂ ಮಾತು ಜೋರಾಗಿರುವುದರಿಂದ ಕಾರಣ ಟಿವಿಯಲ್ಲಿ ಅಭಿನಯ ಕಡಿಮೆಯಿರುವುದರಿಂದ ಶುರುವಿಗೆ ಕಷ್ಟವಾಯಿತಾದರೂ ಸೀತೆ ಧಾರಾವಾಹಿ ಪೌರಾಣಿಕವಾದ್ದರಿಂದ ಮುಂದೆ ಸಲಿಸಾಗುತ್ತಾ ಹೋಯಿತು.

 • ಡ್ರೀಮ್ ರೋಲ್?

ಸೈಕೋ ಪಾತ್ರಗಳನ್ನು ಮಾಡೋದಿಕೆ ತುಂಬಾ ಇಷ್ಟ.

 • ನೀವು ನಟಿಸಿದ ಮೊದಲ ಧಾರಾವಾಹಿ?

ಸುಪ್ರಭಾತ ನನ್ನ ಮೊದಲ ಧಾರಾವಾಹಿ. ನಂತರ ಸೀತೆ, ಅಳುಗುಳಿ ಮನೆ, ಕನಕ, ಮಹಾಭಾರತ, ಅನುರಾಗಸಂಗಮ, ಸದ್ಯ ಪತ್ತೆಧಾರಿ ಪ್ರತಿಭಾ ಹಾಗೂ ತಮಿಳಿನಲ್ಲಿ ಮಹಾಲಕ್ಷ್ಮೀ ಎನ್ನುವ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದೇನೆ.

 • ಕಿರುತೆರೆಯ ಜರ್ನಿ ಹೇಗಿದೆ?

ತುಂಬಾ ಚೆನ್ನಾಗಿದೆ. ಎಲ್ಲಾ ಧಾರಾವಾಹಿಯಲ್ಲೂ ವಿಭಿನ್ನ ರೀತಿಯ ಪಾತ್ರಗಳು ಸಿಕ್ಕಿವೆ. ಹಾಗಾಗಿ ತುಂಬಾ ಖುಷಿಯಾಗುತ್ತೆ.

 • ಸಂದ ಪ್ರಶಸ್ತಿಗಳು?

ರಂಗಭೂಮಿಯಲ್ಲಿ ನಾನು ನಟಿಸಿದಂತಹ ಶಸ್ತ್ರಪರ್ವ ಎನ್ನುವ ನಾಟಕಕ್ಕೆ ಬೆಸ್ಟ್ ಸಪೋರ್ಟಿಂಗ್ ಆ್ಯಕ್ಟರ್ ಪ್ರಶಸ್ತಿ ಲಭಿಸಿದೆ.

 • ನಟನೆಯ ಬಗ್ಗೆ ನಿಮ್ಮ ಅಭಿಪ್ರಾಯ?

ಕೆಲವು ಪಾತ್ರಗಳು ನಾವು ಆಗೋಕೆ ಸಾಧ್ಯವಿಲ್ಲ. ಅಂತಹ ಪಾತ್ರಗಳನ್ನು ನಾವು ಧಾರಾವಾಹಿ ಅಥವಾ ಸಿನಿಮಾಗಳನ್ನು ಮಾಡಿ ನಾವು ಅದನ್ನು ಅನುಭವಿಸಬಹುದು.

 • ನಟನೆಯಿಂದ ಏನು ಕಲಿತಿರಿ?

ಮೊದಲು ತುಂಬಾ ಕೋಪ ಬರುತ್ತಿತ್ತು. ಹಾಗಾಗಿ ಮಹಾಭಾರತದಲ್ಲಿ ಕೃಷ್ಣನ ಪಾತ್ರ ಮಾಡುತ್ತಾ ತಾಳ್ಮೆಯನ್ನು ಕಲಿತೆ.

 • ಕಲಾವಿದನಾಗಿ ನಿಮ್ಮ ಗುರಿ?

ಒಂದೇ ತರಹದ ಪಾತ್ರಕ್ಕೆ ಒಳಗಾಗಬಾರದು. ಎಲ್ಲಾತರಹದ ಪಾತ್ರವನ್ನು ಮಾಡಬೇಕೆಂಬುದೇ ಗುರಿ.

 • ನಿಮ್ಮನ್ನು ಜನರು ವಲ್ಲಭ್ ಎಂದು ಗುರುತಿಸುತ್ತಾರ ಅಥವಾ ಡಾಕ್ಟರ್ ಎಂದು ಕರೆಯುತ್ತಾರ?

ಹ್ಹ ಹ್ಹ..ಈಗ ಜನರು ಡಾಕ್ಟರೇ.. ಡಾಕ್ಟರೇ ಎಂದು ಕರೆಯುತ್ತಾರೆ ಅದಲ್ಲದೆ ಪ್ರತಿಭಾ ಗಂಡನೆಂದು ಗುರುತಿಸುವುದೂ ಉಂಟು .

 • ಈ ಬೆಳವಣಿಗೆಗೆ ಯಾರ‍್ಯಾರನ್ನು ನೆನಪಿಸಿಕೊಳ್ತೀರ?

ನಟನೆ ಕಲಿಸಿದ್ದು ಕೃಷ್ಣಮೂರ್ತಿ ಹಾಗೂ ರಾಜೇಂದ್ರ ಕಾರಂತ್. ಇವತ್ತು ನಾನು ಏನೇ ಆಗಿದ್ದರೂ ರಂಗಸೌರಭ ತಂಡದಿಂದ. ಕಿರಿಕ್ ಪಾರ್ಟಿ ಸಿನಿಮಾದ ಪ್ರಮೋದ್ ಶೆಟ್ಟಿ ಹಾಗೂ ಎಂ.ಡಿ. ನವೀನ್ ಅವರು ನನ್ನನ್ನು ನಟನಾ ಕ್ಷೇತ್ರಕ್ಕೆ ಕರೆತಂದು ಧೈರ್ಯ ತುಂಬಿದರು.

 • ಮುಂದಿನ ಯೋಜನೆ ಏನು?

ಮುಂದೆ ಸಿನಿಮಾ ಅಥವಾ ಧಾರಾವಾಹಿ ಬಂದರೂ ಅಭಿನಯಿಸುವೆ. ಸಿನಿಮಾ ಜಗತ್ತೇ ಬೇರೆ ಹಾಗಾಗಿ ಒಳ‍್ಳೆಯ ಅವಕಾಶಗಳಿಗಾಗಿ ಕಾಯುತ್ತಿದ್ದೇನೆ. ಈಗಾಗಲೇ ಯೂಟರ್ನ್ ಸಿನಿಮಾದಲ್ಲಿ ಪುಟ್ಟ ಪಾತ್ರದಲ್ಲಿ ಅಭಿನಯಿಸಿದ ಅನುಭವವಿದೆ.

 • ಕಾದಂಬರಿ ಆಧರಿತ ಸಿನಿಮಾಗಳು ಮರೆಯಾಗಲು ಕಾರಣವೇನು?

ಬಹುಷಃ ಮೊದಲು ಮಾಸ್ ಸಿನಿಮಾಗಳು ನೋಡುತ್ತಿದ್ದರು. ಈಗ ಜನರ ಮನಸ್ಥಿತಿಯೂ ಬದಲಾಗಿದೆ ಒಳ‍್ಳೆಯ ಕಥೆಯನ್ನಿಟ್ಟುಕೊಂಡು ಸಿನಿಮಾ ಮಾಡಿದಲ್ಲಿ ಜನರು ಖಂಡಿತಾ ಕಾದಂಬರಿ ಸಿನಿಮಾಗಳನ್ನು ನೋಡಬಹುದು

 • ಪತ್ತೆದಾರಿ ಪ್ರತಿಭಾ ಧಾರಾವಾಹಿ ಹೇಗೆ ನಡೀತಿದೆ?

ತುಂಬಾ ಚೆನ್ನಾಗಿ ನಡೀತಿದೆ. ಪ್ರತಿಯೊಂದು ಕಥೆಯಲ್ಲೂ ಹೊಸ ಅಥಿತಿಗಳು ಬರ‍್ತಾ ಇದ್ದಾರೆ. ನವೀನ್ ಕೃಷ್ಣ ಒಬ್ಬ ಅದ್ಭುತವಾದ ನಿರ್ದೇಶಕ ಹಾಗೂ ಎಆರ್ ವಿಕ್ಯಾತ್ ಪ್ರೊಡಿಯೂಸರ್ ನನ್ನ ರಂಗಭೂಮಿ ಗೆಳೆಯ. ಪ್ರತಿಭಾ ತಂಡದ ಜೊತೆಗೆ ಕೆಲಸ ಮಾಡುವುದು ತುಂಬಾ ಖುಷಿ ಕೊಡ್ತಾ ಇದೆ.

 • ಮುಂದೆ ಪತ್ತೆದಾರಿ ಪ್ರತಿಭಾ ಯಾವ ತಿರುವು ಪಡೆದುಕೊಳ‍್ಳುತ್ತಾ ಇದೆ?

ನಂಗೂ ಗೊತ್ತಿಲ್ಲ. ಪ್ರತಿ ವಾರಕ್ಕೂ ಹೊಸ ಕಥೆಯಿಂದ ಕೂಡಿರುವ ಕಾರಣ ಈಗಲೇ ಹೇಳೋಕ್ಕೆ ಆಗಲ್ಲ. ನಾನು ಕುತೂಹಲದಿಂದ ಮುಂದೆ ಯಾವ ರೀತಿಯ ತಿರುವು ಪಡೆದುಕೊಳ‍್ಳಬಹುದೆಂದು ಕಾಯುತ್ತಿರುತ್ತೇನೆ.

 • ಬಿಡುವಿನ ಸಮಯದಲ್ಲಿ ಡಾಕ್ಟರ್ ಏನು ಮಾಡ್ತೀರ?

ನಾನು ಹಾಗೂ ನನ್ನ ಪತ್ನಿ ಮನೆಯ ಮುಂಭಾದಲ್ಲಿ ಗಿಡಗಳನ್ನು ಬೆಳೆಸಿದ್ದೇವೆ. ಅದನ್ನು ನೋಡಿಕೊಳ‍್ಳುತ್ತೇವೆ. ದೂರ ಪಯಾಣ ಮಾಡುವುದು ತುಂಬಾ ಇಷ್ಟ.

 • ನಿಮ್ಮ ಪಾತ್ರ ಹೇಗಿದೆ?

ಒಬ್ಬ ಆದರ್ಶ ಗಂಡ ಹೇಗಿರ‍್ತಾನೆ ಎನ್ನುವುದಕ್ಕೆ ಸಾಕ್ಷಿ ಪ್ರಶಾಂತ. ಪ್ರತಿಭಾ ಮನೆಕೆಲಸ ಹಾಗೂ ಪತ್ತೆದಾರಿ ಮಾಡುವುದರಲ್ಲೂ ಬ್ಯುಸಿಯಾಗಿರುತ್ತಾಳೆ ಅದು ಮನೆಯವರಿಗೆ ತೊಂದರೆಯಾಗುತ್ತೆ. ಮನೆಯವರಿಗೆ ತೊಂದರೆಯಾದಾಗ ಎರಡೂ ಕಡೆ ಸಂಭಾಲಿಸಿಕೊಂಡು ಹೋಗುವ ಪಾತ್ರವೇ ಪ್ರಶಾಂತ್.

 

Tags