ಸುದ್ದಿಗಳು

ಪ್ರಾತಃಸ್ಮರಣೀಯ ‘’ಭೂದಾನ’’ದ ಹರಿಕಾರ

……ಚಳುವಳಿಯ ತೀವ್ರತೆ ಮನಸ್ಸು-ಭಾವನೆ-ಹೃದಯಗಳಿಗೆ ಹೊಕ್ಕಿದಾಗ ತಮ್ಮದೇ ಶೈಕ್ಷಣಿಕ ಪ್ರಮಾಣ ಪತ್ರಗಳನ್ನು ಬೆಂಕಿಯಲ್ಲಿ ಸುಟ್ಟು ಹಾಕಿ, ತಮ್ಮ ನಿಸ್ಪೃಹತೆಯನ್ನೂ, ನಿಸ್ವಾರ್ಥವನ್ನೂ, ವೈರಾಗ್ಯವನ್ನೂ ಮೆರೆದರಷ್ಟೇ ಅಲ್ಲದೇ  ದೈರ್ಯವನ್ನೂ ಸಾಬೀತುಪಡೆಸಿದರು……

ಬೆಂಗಳೂರು, ಆ.10: ನಮ್ಮ ದೇಶದಲ್ಲಿ ‘ಭೂ ದಾನ ಚಳುವಳಿ’ಯ ಮೂಲಕವೇ ಬಡವರ ಬದುಕು ಹಸನಾಗಲು ಸಾದ್ಯವಾಯಿತು ಎಂದು ಅದೆಷ್ಟು ಜನರಿಗೆ ತಾನೇ ಗೊತ್ತಿದೆ ಹೇಳಿ?  ‘ಭೂದಾನ’ ಎಂದರೇ  ಸಾಮಾನ್ಯವಾಗಿ ಭೂಮಿಯನ್ನು ದಾನಮಾಡುವುದು ಎಂದರ್ಥ.

ಈ ದೇಶದ ನೆಲದಲ್ಲಿ ಜರುಗಿದ ಅಭೂತಪೂರ್ವ ಘಟನೆಯೆಂದರೆ 1951ರ ಏಪ್ರಿಲ್ 18ರಂದು, ಅಸಂಖ್ಯಾತ  ಸಾಹುಕಾರರು, ಭೂಮಾಲಿಕರು, ಜಮೀನ್ದಾರರು, ಭೂಮಿಪುತ್ರರು ಎಂದು ಕರೆಯಿಸಿಕೊಳ್ಳುತ್ತಿದ್ದ ಶ್ರೀಮಂತವರ್ಗದವರು, ತಮ್ಮ ಹೊಲಗಳಲ್ಲಿ ಎತ್ತು ದುಡಿದ ಹಾಗೆ ದುಡಿದು ಇಡೀ ಜೀವನವನ್ನು ಕಳೆಯುವ ನಿರ್ಗತಿಕರಿಗೆ, ಅವರ ಜೀವನೋಪಾಯಕ್ಕಾಗಿ ಭೂಮಿಯನ್ನು ದಾನ ಮಾಡಲು ಭಾವೆಯವರ ಒಂದೇ ಒಂದು ಕರೆ ಸಾಕಾಯ್ತಂತೆ..!! ಈ ದೊಡ್ಡ ಮಟ್ಟದ ಯೋಜನೆಗೆ ‘ಭೂ ದಾನ ಚಳುವಳಿ’ ಎಂದು ಕರೆಯುತ್ತಾರೆ.  ಇದರ ಕರ್ತೃವೇ ಆಚಾರ್ಯ ವಿನೋಭಾ ಭಾವೆ…!!  ನಮ್ಮ ದೇಶದ ಮಹಾನ್  ಸ್ವಾತಂತ್ರ್ಯ ಹೋರಾಟಗಾರ, ಚಿಂತಕ, ಶಿಕ್ಷಣ ತಜ್ಞ, ಈ ಬೃಹತ್ ರಾಷ್ಟ್ರದಲ್ಲಿ ಸಮಾನತೆ ತರಲು ಮೂಲಭೂತವಾಗಿ ಕೆಲವು ಮಾರ್ಪಾಡುಗಳನ್ನು ತಂದ ಹರಿಕಾರ..  ವಿನೋಭಾ ಭಾವೆ..!!!

 

ಸ್ವಾತಂತ್ರ್ಯ ಚಳುವಳಿ

ಮಹಾರಾಷ್ಟ್ರದ ಗೋಖಡೆಯಲ್ಲಿ  1895 ಸೆಪ್ಟಂಬರ್ 15ರಂದು  ಅಪ್ಪಟ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ್ದ ಭಾವೆಯವರಿಗೆ ಬಾಲ್ಯದಿಂದಲೇ ವೇದ, ಉಪನಿಷದ್, ಸಂಸ್ಕೃತಿ ಅಭ್ಯಾಸಗಳು ಸ್ವಾಭಾವಿಕವಾಗಿಯೇ ದೊರೆಯಿತು.  ಜೊತೆ ಜೊತೆಗೆ ಭಗವದ್ಗೀತ, ಬೈಬಲ್, ಖುರಾನ್ ಹೀಗೆ ಹಲವು ದರ್ಮ ಗ್ರಂಥಗಳನ್ನೂ ಆಳವಾಗಿ ಓದಿಕೊಳ್ಳುವ ಪರಿಪಾಠ ನಡೆದಿತ್ತು.   ಶೈಕ್ಷಣಿಕವಾಗಿ ಹಿಂದೂ ಬನಾರಸ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದ ಬಳಿಕ  ಇವರು  ಮುಂದುವರೆದು, ಮಹಾತ್ಮ ಗಾಂಧಿಯವರ ಸ್ವಾತಂತ್ರ್ಯ ಚಳುವಳಿಯ ಕರೆಗೆ ತಕ್ಷಣ ಸ್ಪಂದಿಸಿದರು.

 

ಮಹಾತ್ಮರಿಗೆ ಹೆಗಲಿಗೆ ಹೆಗಲು ನೀಡಿದರು ಭಾವೆ.

ಚಳುವಳಿಯ ತೀವ್ರತೆ ಮನಸ್ಸು-ಭಾವನೆ-ಹೃದಯಗಳಿಗೆ ಹೊಕ್ಕಿದಾಗ ತಮ್ಮದೇ ಶೈಕ್ಷಣಿಕ ಪ್ರಮಾಣ ಪತ್ರಗಳನ್ನು ಬೆಂಕಿಯಲ್ಲಿ ಸುಟ್ಟು ಹಾಕಿ, ತಮ್ಮ ನಿಸ್ಪೃಹತೆಯನ್ನೂ, ನಿಸ್ವಾರ್ಥವನ್ನೂ, ವೈರಾಗ್ಯವನ್ನೂ ಮೆರೆದರಷ್ಟೇ ಅಲ್ಲದೇ  ದೈರ್ಯವನ್ನೂ ಸಾಬೀತುಪಡೆಸಿದರು. ತನ್ಮೂಲಕ ಇಡೀ ಜೀವನವನ್ನು ದೇಶಕ್ಕಾಗಿ ಮುಡುಪಾಗಿಟ್ಟರು ಭಾವೆ. ಬಹುಬೇಗನೇ, ಗಾಂಧೀಜಿಯವರ ಸಾಬರ್ಮತಿ ಆಶ್ರಮದಲ್ಲಿ ಮಹಾತ್ಮರಿಗೆ ಹೆಗಲಿಗೆ ಹೆಗಲು ನೀಡಿದರು ಭಾವೆ.  ಮುಂದೆ ದೇಶದ ಉದ್ದಗಲಕ್ಕೂ ರಾಷ್ಟ್ರಪಿತ ತೋರಿದ ಹಾದಿಯಲ್ಲಿ ಸಂಚರಿಸಿ ದೇಶದ ಬಡತನವನ್ನು ನಿರ್ಮೂಲನೆ ಮಾಡಲು. ಕೃಷಿ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅಧ್ಯಯನ ನಡೆಸಿ ಹತ್ತಾರು ಭೂಸುಧಾರಣೆಗಳನ್ನು ಕಾಯ್ದೆಗಳ ರೂಪದಲ್ಲಿ ಕೇಂದ್ರ ಸರಕಾರ ಅನುಷ್ಠಾನ ಕ್ಕಿಳಿಸಲು ಕಾರಣೀಭೂತರಾದರು.

ನಮ್ಮೆಲ್ಲರ ಆದ್ಯ ಕರ್ತವ್ಯ

ಆಬಳಿಕವೇ  ಆಂದ್ರಪ್ರದೇಶ, ಓಡಿಶಾ ಭಾಗದಲ್ಲಿ, ಭೂಮಿಯಿಲ್ಲದ ನಿರ್ಗತಿಕರಿಗೆ ಭೂದಾನ ಮಾಡುವಂತೆ ಜಮೀನ್ದಾರರಲ್ಲಿ ಪ್ರೇರೇಪಿಸಿ, ಸರಿಸುಮಾರು ಎರಡು ಲಕ್ಷ ಎಕರೆ ಭೂಮಿಯನ್ನು ದಾನ ಮಾಡಿಸುವುದರ ಮೂಲಕ ಬಡವರಿಗೆ ಸ್ವಾಭಿಮಾನದಿಂದ ದುಡಿದು ತಿನ್ನುವಂತೆ ಮಾಡಿದ ವಿನೋಭಾ ಭಾವೆ ಈ ದೇಶ ಕಂಡ  ಅಪ್ರತಿಮ ಸಮಾಜವಾದೀ ಪಥದರ್ಶಿಗಳಾದರು.  ಭಾರತ ತನ್ನ 72ನೇ ಸ್ವಾತಂತ್ರ್ಯೋತ್ಸವ  ಆಚರಿಸಿಕೊಳ್ಳಲು ಸಜ್ಜಾಗುತ್ತಿರುವಲ್ಲಿ ಈ ಮಾಹಾನುಭಾವ ವಿನೋಭಾ ಭಾವೆಯವರನ್ನು ಭಾರತೀಯರು ಹಂಬಲಿಸಿ ನೆನೆಯುವುದು ನಮ್ಮೆಲ್ಲರ ಆದ್ಯ ಕರ್ತವ್ಯ ತಾನೇ..??!!

Tags

Related Articles