ಸುದ್ದಿಗಳು

ಸದ್ದಿಲ್ಲದೇ ಬಹುತೇಕ ಚಿತ್ರೀಕರಣ ಮುಗಿಸಿದ ‘ವಿರಾಟ ಪರ್ವ’

ಮೂರು ವರ್ಷಗಳ ಹಿಂದೆ ‘ಮುದ್ದು ಮನಸೇ’ ಚಿತ್ರವನ್ನು ನಿರ್ದೇಶನ ಮಾಡಿದ್ದ ನಿರ್ದೇಶಕ ಅನಂತ್ ಶೈನ್ ಇದೀಗ ” ವಿರಾಟ ಪರ್ವ” ಎಂಬ ಚಿತ್ರವನ್ನು ಸದ್ದಿಲ್ಲದೇ ಆರಂಭಿಸಿದ್ದು, ಈಗಾಗಲೇ ಬಹುತೇಕ ಚಿತ್ರೀಕರಣ ಕೂಡಾ ಮಾಡಿ ಮುಗಿಸಿದ್ದಾರೆ.

ಬೆಂಗಳೂರು, ಅ. 06: ಮೂರು ವರ್ಷಗಳ ಹಿಂದೆ ತೆರೆಗೆ ಬಂದಿದ್ದ ‘ಮುದ್ದು ಮನಸೇ’ ನಿಮಗೆಲ್ಲಾ ನೆನಪಿರಬಹುದು. ಈ ಚಿತ್ರದಲ್ಲಿ ನಟಿಸುವ ಮೂಲಕ ಅರುಗೌಡ ನಾಯಕನಟರಾಗಿ ಹಾಗೂ ರಚಿತಾ ರಾಮ್ ಅವರ ಸಹೋದರಿ ನಿತ್ಯಾ ರಾಮ್ ನಾಯಕಿಯಾಗಿ ಚಿತ್ರರಂಗಕ್ಕೆ ಕಾಲಿಸಿದ್ದರು. ಈ ಚಿತ್ರವನ್ನು ನಿರ್ದೇಶನ ಮಾಡಿದವರು ಅನಂತ್ ಶೈನ್.

ವಿರಾಟ ಪರ್ವ

‘ಮುದ್ದು ಮನಸೇ’ ಚಿತ್ರವು ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿತ್ತು. ಈ ಚಿತ್ರದ ನಂತರ ನಿರ್ದೇಶಕ ಅನಂತ್ ಶೈನ್ ಇದೀಗ ‘ವಿರಾಟ ಪರ್ವ’ ಹೆಸರಿನ ಚಿತ್ರವನ್ನು ಮಾಡುತ್ತಿದ್ದು, ಈಗಾಗಲೇ ಬಹುತೇಕ ಚಿತ್ರೀಕರಣ ಕೂಡಾ ಮಾಡಿ ಮುಗಿಸಿದ್ದಾರೆ.

ಹೊಸ ರೀತಿಯ ಚಿತ್ರ

ಮೊದಲ ಚಿತ್ರದಲ್ಲಿ ಪ್ರೀತಿ –ಪ್ರೇಮದ ಕಥಾಹಂದರವನ್ನು ಹೇಳಿದ್ದ ನಿರ್ದೇಶಕರು ಎರಡನೇಯ ಚಿತ್ರದಲ್ಲಿ ಇಂದಿನ ಜನಾಂಗಕ್ಕೆ ಒಗ್ಗುವಂತಹ ಕಥೆ ಮಾಡಿಕೊಂಡಿದ್ದಾರೆ. ವಿಭಿನ್ನ ಮನಸ್ಥಿತಿಯ ಮೂವರು ಹುಡುಗರ ಸುತ್ತ ಇಡೀ ಸಿನಿಮಾ ಸುತ್ತಲಿದ್ದು, ಹೊಸ ಬಗೆಯ ಕಥೆಯಾಗಿ ಪ್ರೇಕ್ಷಕರಿಗೆ ಇಷ್ಟವಾಗುವ ವಿಶ್ವಾಸ ವ್ಯಕ್ತಪಡಿಸುತ್ತಾರೆ ನಿರ್ದೇಶಕರು. ಇನ್ನು ಕಥೆಯು ಮೂರು ಕಾಲಗಳಲ್ಲಿ ನಡೆಯುವುದರಿಂದ ವಿಭಿನ್ನ ಲೊಕೇಶನ್ ಗಳಲ್ಲೂ ಚಿತ್ರೀಕರಣ ಮಾಡಿದ್ದು, ಸದ್ಯ ಉಳಿದ ಭಾಗದ ಚಿತ್ರೀಕರಣಕ್ಕೆ ಅಣಿಯಾಗುತ್ತಿದ್ದಾರೆ.

ಅಭಿನಯ

ಚಿತ್ರದಲ್ಲಿ ನಟಿ ‘ಅಭಿನಯ’ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಇವರಿಗೆ ನಿಜ ಜೀವನದಲ್ಲಿಯೂ ಮಾತನಾಡಲು ಬರುವುದಿಲ್ಲ (ಮೂಗಿ) ಮತ್ತು ಕಿವಿಯೂ ಕೇಳುವುದಿಲ್ಲ (ಕಿವುಡಿ). ಅವರು ತಮ್ಮದೇ ನಿಜ ಜೀವನದ ಪಾತ್ರವನ್ನು ಈಗಾಗಲೇ ‘ಕಿಚ್ಚು’ ಚಿತ್ರದಲ್ಲಿ ಮಾಡಿದ್ದರು. ಜೊತೆಗೆ ‘ಹುಡುಗರು’ ಚಿತ್ರದಲ್ಲಿ ಪುನೀತ್ ಅವರ ತಂಗಿಯ ಪಾತ್ರವನ್ನು ಮಾಡಿದ್ದರು. ಆದರೆ ಈ ಚಿತ್ರದಲ್ಲಿ ಪಾತ್ರ ಸವಾಲಿನದ್ದಾಗಿದೆ. ಈ ಚಿತ್ರದಲ್ಲಿ ಅವರು ಪೊಲೀಸ್ ಇನ್ಸ್‌ ಪೆಕ್ಟರ್‌ ಆಗಿ ಕಾಣಿಸಿಕೊಳ್ಳುತ್ತಿದ್ದು, ಸಿನಿಮಾದುದ್ದಕ್ಕೂ ಪಟಪಟನೇ ಮಾತನಾಡುವ ಪಾತ್ರ ಸಿಕ್ಕಿದೆ.

ತಾಂತ್ರಿಕ ವರ್ಗ

ವಿರಾಟ ಪರ್ವ ಚಿತ್ರವನ್ನು ಎಸ್.ಆರ್.ಮೀಡಿಯಾ ಪ್ರೊಡಕ್ಷನ್ಸ್ ನಡಿ ಸುನೀಲ್ ಎಂಬುವವರು ನಿರ್ಮಾಣ ಮಾಡುತ್ತಿದ್ದು, ಯಶವಂತ್ ಶೆಟ್ಟಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ‘ಸಿನಿಮಾ ತುಂಬಾ ನೈಜವಾಗಿ ಮೂಡಿ ಬರುತ್ತಿದ್ದು, ತುಂಬಾ ಹೊಸ ಅಂಶಗಳೊಂದಿಗೆ ಚಿತ್ರವು ಸಾಗಲಿದೆ’ ಎಂದು ನಿರ್ದೇಶಕರು ಹೇಳುತ್ತಾರೆ.

Tags