ಸುದ್ದಿಗಳು

ವೆಬ್ ಸರಣಿಗೆ ತಯಾರಾದ ಕನ್ನಡ ಸಿನಿಮಾರಂಗ….!

ಧಾರವಾಹಿಗಳ ಬಗ್ಗೆ ಕೋಪಗೊಳ್ಳುತ್ತಿದ್ದ  ಯುವಜನತೆಗೆ ಇದೀಗ ಇಂಗ್ಲೀಷ್, ಹಿಂದಿ ವೆಬ್ ಸರಣಿಗಳ ಕ್ರೇಜ್ ಶುರುವಾಗಿದೆ. ವರ್ಷಾನುಗಟ್ಟಲೆ ಎಳೆಯುವ ಧಾರವಾಹಿಗಳಿಗೆ ಸ್ಪರ್ಧೆಯೊಡ್ಡುತ್ತಿರುವ ಈ ವೆಬ್ ಸಿರೀಸ್ ಗಳು ಪ್ರೇಕ್ಷಕನಿಗೆ ತುಂಬಾ ಹಿಡಿಸಿದೆ ಎಂಬುದಕ್ಕೆ ಇಂಗ್ಲೀಷ್ ಹಾಗೂ ಹಿಂದಿಯಲ್ಲಿ ಬಿಡುಗಡೆಯಾದ ವೆಬ್ ಸರಣಿಗೆ ವ್ಯಕ್ತವಾದ ಪ್ರತಿಕ್ರಿಯೆಗಳೇ ಸಾಕ್ಷಿ.

ವೆಬ್ ಸರಣಿಯತ್ತ ನಿರ್ಮಾಪಕರು

ನೆಟ್ ಪ್ಲಿಕ್ಸ್ ನಲ್ಲಿ ವೆಬ್ ಸಿರೀಸ್ ಗಳ ಹೆಚ್ಚು ಸದ್ದು ಮಾಡಿದ್ದರಿಂದ, ಇದೀಗ ಚಿತ್ರ ನಿರ್ಮಾಪಕರು ಕೂಡ ವೆಬ್ ಸಿರೀಸ್ ನತ್ತ ಹೆಚ್ಚು ಒಲವು ತೋರುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಬಾಲಿವುಡ್ ಈಗಾಗಲೇ ವೆಬ್ ಸಿರೀಸ್ ನ ಪ್ರಯೋಗಾತ್ಮಕತೆಗೆ ಒಗ್ಗಿಕೊಂಡರೆ, ಕಳೆದ ತಿಂಗಳು ಅಮೇಜಾನ್ ಪ್ರೈಂ ವಿಡಿಯೋದಲ್ಲಿ ತೆಲುಗು ವೆಬ್ ಸರಣಿ ಗ್ಯಾಂಗ್ ಸ್ಟಾರ್ಸ್ ಬಿಡುಗಡೆಯಾಯಿತು. ಜಗಪತಿ ಬಾಬು ಸೇರಿದಂತೆ ಹಲವು ನಟ ನಟಿಯರು ನಟಿಸಿದ ಈ ಸರಣಿ 12 ಸಂಚಿಕೆಯಲ್ಲಿ ಬಿಡುಗಡೆಯಾಯಿತು. ಆದರೆ ಇದಕ್ಕೆ ಪ್ರೇಕ್ಷಕನಿಂದ ಅಂದುಕೊಂಡ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ. ಬಾಲಿವುಡ್ ಹಾಗೂ ಹಾಲಿವುಡ್ ಸಿನಿಮಾಗಳಿಗೆ ಸಿಗುವ ಪ್ರೋತ್ಸಾಹ ತೆಲುಗು ವೆಬ್ ಸರಣಿ ಗೆ ಸಿಗಲಿಲ್ಲವಾದರೂ,  ಅಲ್ಲಿನ ಸಿನಿಮಾ ನಿರ್ಮಾಣ ಸಂಸ್ಥೆಗಳು ವೆಬ್ ಸರಣಿಗಳತ್ತ ಹೆಚ್ಚು ಆಸಕ್ತಿ ವಹಿಸುತ್ತಿದೆ ಎಂಬುದು ಸಕಾರಾತ್ಮಕ ಬೆಳವಣಿಗೆ.‘ಹೇಟ್ ಯೂ ರೋಮಿಯೋ’ ವೆಬ್ ಸರಣಿ

ಇನ್ನೂ ಕನ್ನಡ ಸಿನಿಮಾರಂಗವೂ ಇದೀಗ ವೆಬ್ ಸರಣಿಯ ಪ್ರಯೋಗಾತ್ಮಕತೆಗೆ ಒಡ್ಡಿಕೊಳ್ಳಲು ಮುಂದಾಗುತ್ತಿದೆ. ನಟ ಶಿವರಾಜ್ ಕುಮಾರ್ ಪುತ್ರಿ ನಿವೇದಿತ ನೇತೃತ್ವದಲ್ಲಿ ಮುತ್ತು ಸಿನಿ ಸರ್ವೀಸಸ್ ಮತ್ತು ಸಖತ್ ಸ್ಟುಡಿಯೋ ಸಹನಿರ್ಮಾಣದಲ್ಲಿ ‘ಹೇಟ್ ಯೂ ರೋಮಿಯೋ’ ವೆಬ್ ಸರಣಿ ತಯಾರಾಗುತ್ತಿದೆ. ಈ ವೆಬ್ ಸರಣಿಗೆ  ಪ್ರೇಕ್ಷಕ ಯಾವ ರೀತಿ ಪ್ರತಿಕ್ರಿಯೆ ಕೊಡುತ್ತಾನೆ ಎಂಬುದನ್ನು ಕಾದು ನೋಡಬೇಕಿದೆ. ಅಂದಹಾಗೆ ಕನ್ನಡದಲ್ಲಿ ತಯಾರಾಗುವ ಸರಣಿಗಳಿಗೆ ಇಂಗ್ಲೀಷ್ ಸಬ್ ಟೈಟಲ್ ಕೂಡ ನೀಡಲಾಗುತ್ತದೆ. ಇನ್ನೂ ಕನ್ನಡದ  ಸಿನಿಮಾಗಳು ಕ್ವಾಲಿಟಿಯಲ್ಲಿ ರಾಜಿ ಮಾಡಿಕೊಳ್ಳುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿರುವಂತೆ, ಜಾಗತಿಕವಾಗಿ ಬೆಳೆಯುತ್ತಿರುವ ವೆಬ್ ಸರಣಿಯಲ್ಲಿ  ಮಾರುಕಟ್ಟೆ ಹೆಚ್ಚಿಸಿಕೊಳ್ಳಬೇಕು ಎಂದಾದರೆ ಕನ್ನಡ ವೆಬ್ ಸರಣಿಗಳು ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳುವಂತಿಲ್ಲ. ಹೀಗಾಗಿ ದೊಡ್ಡ ಸ್ಟ್ರೀಮಿಂಗ್ ಸರ್ವೀಸ್ ಪ್ರೋವೈಡರ್ ಗಳು, ಕನ್ನಡ ವೆಬ್ ಸರಣಿಗಳಿಗೆ ಕೈ ಜೋಡಿಸಬೇಕು ಎಂದಾದರೆ, ಗುಣಮಟ್ಟ ಬಹುಮುಖ್ಯವಾಗಿದೆ. ಹೇಟ್ ಯೂ ರೋಮಿಯೋ ಸರಣಿಯ ಬಹುತೇಕ ಚಿತ್ರೀಕರಣ ವಿಯೆಟ್ನಾಂ ನಲ್ಲಿ ನಡೆದಿದ್ದು, ಇದರೊಂದಿಗೆ ಕನ್ನಡ ವೆಬ್ ಸಿರೀಸ್ ಆರಂಭವಾಗಲಿದೆ. ಹೇಟ್ ಯೂ ರೋಮಿಯೋ ಹಾಸ್ಯ ಪ್ರಧಾನ ಸರಣಿಯಾಗಿದ್ದು, ಮುಖ್ಯಪಾತ್ರದಲ್ಲಿ ಅರವಿಂದ್ ಅಯ್ಯರ್ ನಟಿಸುತ್ತಿದ್ದಾರೆ.

ಇನ್ನೊಂದೆಡೆ ಪ್ರಯೋಗಶೀಲ ಸಿನಿಮಾಗಳಲ್ಲಿ ಗುರುತಿಸಿಕೊಂಡಿರುವ ನಿರ್ದೇಶಕ ಬಿ ಎಂ ಗಿರಿರಾಜ್‌  ರಕ್ತಚಂದನ ವೆಬ್ ಸರಣಿಯನ್ನು ಘೋಷಿಸಿದ್ದು ಕ್ರೈಂ-ಥ್ರಿಲ್ಲರ್ ಸರಣಿಯ ನಲವತ್ತು ನಿಮಿಷಗಳ ಆರು ಸಂಚಿಕೆಗಳು ಚಿತ್ರೀಕರಣಗೊಂಡಿದ್ದು ಚಿತ್ರದ ಪೋಸ್ಟ್ ಪ್ರೋಡಕ್ಷನ್ ಕಾರ್ಯ ಸಾಗಿದೆ. ಒಟ್ಟಾರೆ ಕನ್ನಡದಲ್ಲಿಯೂ ವೆಬ್ ಸಿರೀಸ್ ಗಳು ಆರಂಭವಾಗುತ್ತಿದ್ದು, ಇದಕ್ಕೆ ಪ್ರೇಕ್ಷಕ ಕೊಡುವ ಪ್ರತಿಕ್ರಿಯೆ ಮೇಲೆ, ಕನ್ನಡದ ವೆಬ್ ಸಿರೀಸ್ ಗಳ ಭವಿಷ್ಯ ನಿರ್ಧಾರವಾಗಲಿದೆ ಎಂಬುದು ಸತ್ಯ.

Tags

Related Articles