ಸುದ್ದಿಗಳು

‘ಯಾರಿಗೆ ಯಾರುಂಟು’ ಅಂತ ‘ಒರಟ’ ವಾಪಾಸ್ಸು ಬಂದ…!!!

‘ಒರಟ- ಐ ಲವ್ ಯೂ’ ಚಿತ್ರದ ಮೂಲಕ ಸಿನಿ ರಸಿಕರನ್ನು ಗಮನ ಸೆಳೆದಿದ್ದ ನಟ ಪ್ರಶಾಂತ್ , ‘ಬೆಳ್ಳಿ’ ಚಿತ್ರದ ನಂತರ ‘ಯಾರಿಗೆ ಯಾರುಂಟು’ ಎಂದು ಹೇಳುವ ಮೂಲಕ ಚಿತ್ರರಂಗಕ್ಕೆ ವಾಪಸ್ಸಾಗಿದ್ದಾರೆ.

ಬೆಂಗಳೂರು, ಆ. 07: ‘ಪಯಣ’, ‘ಸಂಚಾರಿ’, ‘ಪಾರು ವೈಫ್ ಆಫ್ ದೇವದಾಸ್’ ಚಿತ್ರಗಳ ಖ್ಯಾತಿಯ ನಿರ್ದೇಶಕ ಕಿರಣ್ ಗೋವಿ ಹಾಗೂ ಒರಟ ಖ್ಯಾತಿಯ ‘ಪ್ರಶಾಂತ್’ ರೊಂದಿಗೆ ಸೇರಿಕೊಂಡು ‘ಯಾರಿಗೆ ಯಾರುಂಟು’ ಎನ್ನುತ್ತಿದ್ದಾರೆ. ಇವರು ಏಕೆ ಹೀಗೆ ಹೇಳುತ್ತಿದ್ದಾರೆ ಅಂತ ನಿಮಗೆ ಅನಿಸಬಹುದು. ಆದರೆ ‘ಯಾರಿಗೆ ಯಾರುಂಟು’ ಎಂಬುದು ಅವರಿಬ್ಬರೂ ಸೇರಿ ಮಾಡುತ್ತಿರುವ ಚಿತ್ರದ ಹೆಸರು.

ಒರಟ ಪ್ರಶಾಂತ್

‘ಒರಟ’ ಚಿತ್ರದ ನಂತರ ಪ್ರಶಾಂತ್ ಅನೇಕ ಚಿತ್ರಗಳಲ್ಲಿ ನಟಿಸಿದ್ದರೂ ಹೇಳುಕೊಳ್ಳುವಂತಹ ಯಶಸ್ಸು ಸಿಕ್ಕಿರಲಿಲ್ಲ. ಹೀಗಾಗಿ ಈ ಚಿತ್ರದ ಮೇಲೆ ಕುತೂಹಲ ಹೆಚ್ಚಾಗಿದೆ. ಈಗಾಗಲೇ ಈ ಚಿತ್ರವು ತನ್ನ ಪೋಸ್ಟರ್ಸ್ ಗಳ ಮೂಲಕ ಸಿನಿ ಪ್ರೇಮಿಗಳ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದೊಂದು ಪಕ್ಕಾ ಪ್ರೇಮಮಯ ಕತೆಯನ್ನು ಒಳಗೊಂಡಿದ್ದು, ಈ ಮುಂಚೆ ‘ಅಕಿರಾ’ ಸಿನಿಮಾದಲ್ಲಿ ಮಿಂಚಿದ್ದ ಅದಿತಿ ರಾವ್ ಮತ್ತು ಕೃತಿಕಾ ಚಿತ್ರಕ್ಕೆ ನಾಯಕಿಯರಾಗಿ ನಟಿಸಿದ್ದಾರೆ.

ಆಗಸ್ಟ್ 16ಕ್ಕೆ ಹಾಡುಗಳು

ನಿರ್ದೇಶಕ ಕಿರಣ್ ಗೋವಿ ಅವರ ಈ ಹಿಂದಿನ ಚಿತ್ರಗಳು ಹಾಡುಗಳ ಮೂಲಕವೇ ಗಮನ ಸೆಳೆದಿದ್ದವು. ಈ ಬಾರಿಯೂ ಅದನ್ನೇ ಪುನರಾವರ್ತನೆ ಮಾಡುತ್ತಿದ್ದಾರಂತೆ. ಈ ಚಿತ್ರದಲ್ಲಿಯೂ ಅವರು ಹಾಡುಗಳಿಗೆ ಪ್ರಾಮುಖ್ಯತೆ ನೀಡಿದ್ದು, ಆಗಸ್ಟ್ 16 ಕ್ಕೆ ಚಿತ್ರದ ಧ್ವನಿಸುರುಳಿ ಬಿಡುಗಡೆಯಾಗಲಿದೆ. ಈ ಚಿತ್ರಕ್ಕೆ ಬಿ.ಜೆ.ಭರತ್ ಅವರು ಸಂಗೀತ ಸಂಯೋಜನೆ ಮಾಡಿದ್ದು ರಾಕೇಶ್ ಸಿ ತಿಲಕ್ ಅವರ ಛಾಯಾಗ್ರಾಹಕ, ಎನ್.ಎಂ.ವಿಶ್ವ ಅವರ ಸಂಕಲನ ಈ ಚಿತ್ರಕ್ಕಿದೆ. ಎಸ್.ಎಲ್.ಆರ್.ಎಂಟರ್ ಪ್ರೈಸೆಸ್ ಬ್ಯಾನರ್ ನಡಿಯಲ್ಲಿ ಶೋಭ ರಘುನಾಥ್.ಎಚ್.ಎಂಬುವವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

Tags