ಸುದ್ದಿಗಳು

“ಸ್ಟಾರ್ ಗಳಿಗೆ ಸುಪಾರಿ”

ಎಲ್ಲಾ ಕ್ಷೇತ್ರಗಳಲ್ಲಿಯೂ ಒಬ್ಬರನ್ನು ಮೀರಿ ಇನ್ನೊಬ್ಬ ಬೆಳೆಯಬೇಕು ಅನ್ನೋ ಸ್ಪರ್ಧೆ ಇದ್ದೇ ಇರುತ್ತೆ.ಅದು ಚಿತ್ರರಂಗ ಇರಬಹುದು ಅಥವ ಯಾವುದೇ ಬೇರೆ ಬೇರೆ ಕ್ಷೇತ್ರಗಳಿರಬಹುದು. ಆದರೆ ಬೆಳೆಯುವ ಭರದಲ್ಲಿ ನಡೆಸುವ ಸ್ಪರ್ಧೆ ಆರೋಗ್ಯಕರವಾಗಿ ಇದ್ದು ಯಾರಿಗೂ ತೊಂದರೆಯಾಗದಂತೆ ನೋಡಿಕೊಳ್ಳಬೇಕು.

ಸಾಮಾನ್ಯವಾಗಿ ಕಂಡು ಬರುವುದು ಒಬ್ಬನನ್ನು ನೋಡಿ ಅವನಿಗಿಂತ ಮೇಲೆ ಬರಬೇಕು ಅಂತ ಅಂದುಕೊಂಡ ವ್ಯಕ್ತಿ ಆಯ್ದುಕೊಳ್ಳುವುದು ಕೆಟ್ಟ ಮಾರ್ಗವನ್ನೇ ಅನ್ನೋದು ಕಾಕತಾಳಿಯವಾದರೂ ಸತ್ಯ. ಎದುರಾಳಿಗೆ ತೊಂದರೆ ನೀಡಿ ಅಥವ ಹೇಗಾದರೂ ಮಾಡಿ ಅವನನ್ನು ತುಳಿದು ಬೆಳೆಯಬೇಕೆಂದುಕೊಳ್ಳುತ್ತಾನೆ…ಅದು ತಪ್ಪು.

ಸ್ಪರ್ಧೆ ಹೇಗಿರಬೇಕು ಅಂದ್ರೆ ಇನ್ನೊಬ್ಬರ ಏಳಿಗೆಯನ್ನು ಕಂಡು ಅದನ್ನು ಸ್ಪೂರ್ತಿಯನ್ನಾಗಿ ತಗೊಂಡು ಅವರಿಗಿಂತ ಮೇಲ್ಮಟ್ಟಕ್ಕೆ ಬೆಳೆಯಬೇಕು…ಆಗ ಎಲ್ಲರೂ ನೆಮ್ಮದಿಯಿಂದ ಇರಲು ಸಾಧ್ಯ.

ಅದರಲ್ಲೂ ಈ ಬಣ್ಣದ ಲೋಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಈ ರೀತಿಯ ಜನರು ತುಂಬಾ ಸಿಗುತ್ತಾರೆ. ಇದು ತುಂಬಾ ವರ್ಷಗಳಿಂದ ನಡೆದುಕೊಂಡು ಬಂದಿರುವಂತದ್ದು.ಈ ರೀತಿಯ ಅನಾರೋಗ್ಯಕರ ಸ್ಪರ್ಧೆ ಹಲವು ಅನಾಹುತಗಳಿಗೂ ಕಾರಣವಾಗಿದೆ.

ಈಗ ಸಧ್ಯದ ಹಾಟ್ ವಿಷ್ಯ ಅಂದ್ರೆ ತನ್ನ ಸ್ವಪ್ರತಿಭೆಯಿಂದ ಬೆಳೆದು ಸ್ಟಾರ್ ನಟನಾಗಿರುವ ಯಶ್ ರನ್ನು ಕೊಲ್ಲಲು ರೌಡಿ ಪಡೆಯೊಂದು ಸುಪಾರಿ ತೆಗೆದುಕೊಂಡಿದ್ದ ವಿಷಯ ಹಾಗು ಎರಡು ವರ್ಷಗಳ ಹಿಂದೆ ಅವರ ಕಾರಿನ ಮೇಲೆ ಅಟ್ಯಾಕ್ ಮಾಡಿದ್ದರೆಂಬ ವಿಷಯ ಸೈಕಲ್ ರವಿ ಎಂಬ ಪಾತಕಿಯ ಬಾಯಿಂದ ಬಯಲಾಗಿದೆ.

ತುಂಬಾ ವರ್ಷಗಳಿಂದ ಈ ರೀತಿಯ ಸುಪಾರಿ ಡೀಲ್ ಗಳು ಬಾಲಿವುಡ್ ನಲ್ಲಿ ಹೆಚ್ಚಾಗಿ ಕಂಡು ಬರುತ್ತಿದ್ದವು, ಅದಕ್ಕೆ ಅಲ್ಲಿ ಹಲವಾರು ಕಲಾವಿದರೂ ,ನಿರ್ಮಾಪಕರು ಬಲಿಯಾಗಿದ್ದಾರೆ. ಆದರೆ ಈಗ ಸುಪಾರಿ ಸಂಸ್ಕೃತಿ ನಮ್ಮ ಚಂದನವನಕ್ಕೂ ಕಾಲಿಟ್ಟಿರೋದು ಅಪಾಯದ ಸೂಚನೆ. ಇದು ಸಧ್ಯದ ಮಟ್ಟಿಗೆ ಗಾಂಧಿನಗರದಲ್ಲಿ ಸಂಚಲನ ಸೃಷ್ಠಿ ಮಾಡಿ ಚರ್ಚೆಗೆ ಗ್ರಾಸವಾಗಿದೆ.

ಎಲ್ಲರ ಪ್ರಶ್ನೆ,ಅನುಮಾನ ಒಂದೇ.. ಯಶ್ ಕೊಲೆಗೆ ಸುಪಾರಿ ಕೊಟ್ಟವರು ಯಾರು? ಇದಕ್ಕೆ ಯಾರ ಬಳಿಯೂ ಉತ್ತರವಿಲ್ಲ..ಪಾತಕಿಗಳು ಕೂಡ ಬಾಯಿ ಬಿಟ್ಟಿಲ್ಲ.ಸುಮ್ಮನೆ ಅವರವರ ಭಾವಕ್ಕೆ ತಕ್ಕಂತೆ ಯೋಚಿಸುವಂತಾಗಿದೆ.
ಆದರೆ ಒಂದಂತೂ ಸತ್ಯ..ಯಾರ ಏಳಿಗೆಯನ್ನು ಯಾರೂ ತಡೆಯಲು ಸಾಧ್ಯವಿಲ್ಲ ..ಅವರವರ ಶ್ರಮ,ಪ್ರತಿಭೆ,ಪ್ರಾಮಾಣಿಕತೆಯಿಂದ ಅವರು ಬೆಳೆಯುತ್ತಾರೆ.ಅಡ್ಡದಾರಿ ಹಿಡಿದವರು ಒಂದಲ್ಲ ಒಂದು ದಿನ ತಕ್ಕ ಶಾಸ್ತಿ ಅನುಭವಿಸುತ್ತಾರೆ ಎಂಬುದು ದೊಡ್ಡವರು ಹೇಳುವ ಮಾತು. ಆದ್ದರಿಂದ ಸಿನಿರಂಗದಲ್ಲಾಗಲಿ,ವೈಯಕ್ತಿಕ ಬದುಕಿನಲ್ಲಾಗಲಿ,ರಾಜಕೀಯದಲ್ಲಾಗಲಿ, ಮತ್ಯಾವುದೇ ಕ್ಷೇತ್ರದಲ್ಲಾಗಲಿ ಸ್ಪರ್ಧೆ ಆರೋಗ್ಯಕರವಾಗಿರಲಿ..ಯಾರಿಗೂ ತೊಂದರೆಯಾಗಿ ಕೆಡುಕಾಗದಿರಲಿ..

 

ಲೇಖನ-ನಾಗೇಶ್ ಕಾರ್ತಿಕ್

Tags