ಸುದ್ದಿಗಳು

ಸೃಷ್ಟಿಯ ಮೊದಲ ಪ್ರೇಮ ಕಾವ್ಯವನ್ನೊಳಗೊಂಡ “ಶ್ರೀ ವಿಷ್ಣು ದಶಾವತಾರ”

ನಿಮ್ಮ ನೆಚ್ಚಿನ ಜೀ ಕನ್ನಡ ವಾಹಿನಿಯಲ್ಲಿ ಇದೇ ಸೋಮವಾರದಿಂದ ಪ್ರಸಾರವಾಗಲಿದೆ.

ಬೆಂಗಳೂರು, ಅ.12: ಜೀ ಕನ್ನಡ  ವಿಭಿನ್ನ ಕಾರ್ಯಕ್ರಮಗಳ ಮೂಲಕ ಜನರಿಗೆ ಮನರಂಜನೆ ನೀಡುವ ಪೈಕಿ  ‘ಜೀ ಕನ್ನಡ’ ವಾಹಿನಿಯೂ ಒಂದು.  ‘ಸುಬ್ಬಲಕ್ಷ್ಮಿ ಸಂಸಾರ’, ‘ಕಮಲಿ’, ‘ಯಾರೇ ನೀ ಮೋಹಿನಿ’, ವಿದ್ಯಾ ವಿನಾಯಕ, ಮಹಾದೇವಿ, ನಾಗಿಣಿ, ಗಂಗಾ ಮತ್ತು ಬ್ರಹ್ಮಗಂಟು ಧಾರಾವಾಹಿಯ ಮೂಲಕ ಜೀ ಕನ್ನಡ ವಾಹಿನಿಯು ಕಿರುತೆರೆ ವೀಕ್ಷಕರ ಮನದಲ್ಲಿ ಶಾಶ್ವತ ಸ್ಥಾನ ಪಡೆದಿರುವುದಂತೂ ಸತ್ಯ. ಇದರ ಜೊತೆಗೆ ಕೆಲವು ದಿನಗಳ ಹಿಂದೆ ‘ಉಘೇ ಉಘೇ ಮಾದೇಶ್ವರ’ ಎಂಬ ಪೌರಾಣಿಕ ಧಾರಾವಾಹಿಯೂ ಕೂಡ ಇತ್ತೀಚೆಗೆ ಆರಂಭವಾಗಿತ್ತು. ಇದರ ಜೊತೆಗೆ ಜೀ ವಾಹಿನಿಯು ಈಗ ಮಗದೊಂದು ಪೌರಾಣಿಕ ಧಾರಾವಾಹಿಯತ್ತ ಮುಖ ಮಾಡಿದೆ.

ಜೀ ಕನ್ನಡ ವಾಹಿನಿಯ ಬಿಜಿನೆಸ್ ಹೆಡ್ ರಾಘವೇಂದ್ರ ಹುಣಸೂರು

ಇದೇ ತಿಂಗಳು 15ರಿಂದ ‘ಶ್ರೀವಿಷ್ಣು ದಶಾವತಾರ’ ಪ್ರಸಾರವಾಗಲಿದೆ. ದಕ್ಷಿಣ ಭಾರತದ ಕಿರುತೆರೆ ಲೋಕದಲ್ಲಿ ಇದು ಹೊಸ ಪ್ರಯತ್ನ ಎನ್ನುತ್ತಾರೆ. ಜೀ ಕನ್ನಡ ವಾಹಿನಿಯ ಬಿಜಿನೆಸ್ ಹೆಡ್ ರಾಘವೇಂದ್ರ ಹುಣಸೂರು. ‘‘ಶ್ರೀ ವಿಷ್ಣು ದಶಾವತಾರ’ದ ಕಲ್ಪನೆ ಎರಡು ವರುಷಗಳ ಹಿಂದೆಯೇ ಹುಟ್ಟಿಕೊಂಡಿತು. ಇನ್ನು ಇದಕ್ಕಾಗಿ ಕಳೆದ ಒಂದು ವರ್ಷದಿಂದ ನಿರಂತರ ಕೆಲಸಗಳು ನಡೆಯುತ್ತಿವೆ. ದಕ್ಷಿಣ ಭಾರತದಲ್ಲಿ ಈಗಾಗಲೇ ಅನೇಕ ಪೌರಾಣಿಕ ಧಾರಾವಾಹಿಗಳು ಪ್ರಸಾರವಾಗಿದ್ದು ನಮಗೆಲ್ಲಾ ಗೊತ್ತೇ ಇದೆ. ಆದರೆ ಅವೆಲ್ಲವೂ ಹಿಂದಿ ಧಾರಾವಾಹಿಯ ರಿಮೇಕ್ ಆಗಿದ್ದವು. ಆದರೆ ‘ಶ್ರೀ ವಿಷ್ಣು ದಶಾವತಾರ’ ಅದಕ್ಕೆ ಹೊರತಾಗಿದೆ‌. ಈ ಪೌರಾಣಿಕ ಧಾರಾವಾಹಿಯನ್ನು ಸ್ವತಃ ನಾವೇ ಸಂಶೋಧನೆ ನಡೆಸಿ, ಸ್ಕ್ರಿಪ್ಟ್ ಸಿದ್ಧಪಡಿಸಿದ್ದೇವೆ. ಇದು ಸಂಪೂರ್ಣ ಸ್ವಮೇಕ್ ಎಂದು ಹೇಳಲು ನಿಜಕ್ಕೂ ಹೆಮ್ಮೆಯಾಗುತ್ತದೆ. ಇದರ ಜೊತೆಗೆ ಈ ಧಾರಾವಾಹಿಯಲ್ಲಿ ಅತ್ಯುತ್ತಮ ಗ್ರಾಫಿಕ್ಸ್ ಬಳಕೆ ಮಾಡಲಾಗಿದೆ’ ಎಂದು ಸಂತಸದಿಂದ ಹೇಳುತ್ತಾರೆ

ಸೃಷ್ಟಿಯ ಮೊದಲ ಪ್ರೇಮಕಾವ್ಯ

‘ವಿಷ್ಣು-ಲಕ್ಷ್ಮೀ ನಡುವೆ ಒಂದು ಪ್ರೇಮಕಥೆ ಇತ್ತು. ಇದು ನಮಗೆ ಸಂಶೋಧನೆ ವೇಳೆ ತಿಳಿಯಿತು. ಕಥೆಯ ಆಳವನ್ನು ಹುಡುಕುತ್ತಾ ಹೋದಾಗ ಈ ವಿಚಾರಗಳು ತಿಳಿದು ಬಂದವು. ಮುಖ್ಯವಾದ ವಿಚಾರವೇನೆಂದರೆ, ನಾವು ಯಾವುದೇ ವಿಚಾರವನ್ನು ಹೆಚ್ಚುವರಿಯಾಗಿ ಸೇರಿಸಿಲ್ಲ. ಏನಿದೆಯೋ ಅದನ್ನು ಹೇಳುತ್ತಿದ್ದೇವೆ’ ಎಂದು ಧಾರಾವಾಹಿಯ ಕುರಿತ ವಿಚಾರವನ್ನು ಹಂಚಿಕೊಳ್ಳುತ್ತಾರೆ ರಾಘವೇಂದ್ರ. ಬಹು ಮುಖ್ಯವಾಗಿ ಶ್ರೀ ವಿಷ್ಣು ದಶಾವತಾರ ಒಂದು ಪ್ರೇಮಕಾವ್ಯ ಆಗಲಿದೆ ಎಂಬುದು ಅವರ ಅಭಿಪ್ರಾಯ.

ಮುಂಬೈಯಲ್ಲಿ ಈ ಧಾರಾವಾಹಿ ಚಿತ್ರೀಕರಣ ನಡೆಯುತ್ತಿದೆ.

ಈ  ಪೌರಾಣಿಕ ಧಾರಾವಾಹಿಯನ್ನು ಮೊದಲು ಬೆಂಗಳೂರಿನಲ್ಲೇ ಸೆಟ್ ಹಾಕಿ ಶೂಟ್ ಮಾಡುವ ಯೋಜನೆ ನಮ್ಮದಾಗಿತ್ತು. ಆದರೆ ತಂತ್ರಜ್ಞರು ಮತ್ತು ಗ್ರಾಫಿಕ್ಸ್ ತಂಡ ಮುಂಬೈನಲ್ಲಿ ಇದ್ದಿದ್ದರಿಂದ ನಾವು ಅಲ್ಲಿಯೇ ತೆರಳಬೇಕಾಯಿತು. ಪ್ರತಿ ಯುಗಕ್ಕೂ ಬೇರೆ ಬೇರೆ ಸೆಟ್ ಹಾಕಿದ್ದೇವೆ’ ಎನ್ನುತ್ತಾರೆ.

ಮುಂಬೈ ಮೂಲದ ಕ್ರಿಯೇಟಿವ್ ಐ ಸಂಸ್ಥೆಯ ಮುಖ್ಯಸ್ಥ ಧೀರಜ್ ಕುಮಾರ್ ‘ಶ್ರೀ ವಿಷ್ಣು ದಶಾವತಾರ’ದ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಈಗಾಗಲೇ ಅನೇಕ ಪೌರಾಣಿಕ ಧಾರಾವಾಹಿಗಳನ್ನು ನಿರ್ವಿುಸಿದ ಅನುಭವ ಅವರಿಗಿದೆ.

ಐಟಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಅಮಿತ್ ಕಶ್ಯಪ್ ಅವರು ವಿಷ್ಣುವಿನ ಪಾತ್ರದಲ್ಲಿ ಹಾಗೂ ನಿಶಾ ಅವರು ಲಕ್ಷ್ಮೀ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಕ್ಟೋಬರ್ 15 ರಿಂದ ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿ ರಾತ್ರಿ 8 ಗಂಟೆಗೆ ಈ ಧಾರಾವಾಹಿ ಪ್ರಸಾರವಾಗಲಿದೆ.

Tags

Related Articles